ಜ್ಞಾನ ಸಂಪಾದನೆಗೆ ಜಿಜ್ಞಾಸೆಯೇ ಮೂಲ

0
24

ದ್ವೈತ ದರ್ಶನದಲ್ಲಿ, ಧರ್ಮಕ್ಕೆ ಒಂದು ಸ್ಪಷ್ಟ ಮತ್ತು ವೈದಿಕ ಅರ್ಥ ವ್ಯಾಖ್ಯಾನವಿದೆ. ಅವರ ಪ್ರಕಾರ, ಧರ್ಮವು ಪರಮಾತ್ಮನ ಆದೇಶವನ್ನು ಅನುಸರಿಸುವುದು ಮತ್ತು ಜೀವಾತ್ಮನ(ಜೀವಿಗಳು) ಪರಮಾರ್ಥವನ್ನು ಸಾಧಿಸುವ ಸಾಧನವಾಗಿದೆ. ಧರ್ಮಾಚರಣೆ ಯಾವುದಕ್ಕಾಗಿ ಮಾಡಬೇಕು ಎಂದರೆ, “ಭಗವತ್ಪ್ರೀತ್ಯರ್ಥಂ ಕೃತಃ ಧರ್ಮಃ” ಅಂದರೆ ಭಗವಂತನ ಪ್ರೀತಿಗಾಗಿ, ಭಗವಂತನ ಅನುಗ್ರಹಕ್ಕಾಗಿ, ವೇದ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಕರ್ಮಗಳು ಹಾಗೂ ನೈತಿಕ ನಡುವಳಿಕೆಗಳನ್ನು ಶುದ್ಧ ಭಕ್ತಿಯಿಂದ ಆಚರಿಸಬೇಕು.
ಧರ್ಮದ ಮೂಲಭೂತ ಅಂಶಗಳು ಎರಡು. ಒಂದು ಭಕ್ತಿಮಾರ್ಗ ಇನ್ನೊಂದು ನೈತಿಕತೆಯಿಂದ ಜೀವನ ನೆಡೆಸುವುದು. ಅಷ್ಟಾಂಗ ಯೋಗ, ಧ್ಯಾನ, ಜಪ, ಪೂಜೆ, ದಾನ, ಯಜ್ಞ ಇತ್ಯಾದಿ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾ ಶುದ್ಧ ಭಕ್ತಿಯಿಂದ “ಹರಿಃ ಪರೋ ಧರ್ಮಃ” ಎಂಬ ಸದೃಢ ಮನಸ್ಸಿನಿಂದ ಭಗವಂತನನ್ನು ಭಜಿಸುತ್ತಾ ಜೀವನ ನಿರ್ವಣಹೆ ಮಾಡುವುದು ಶ್ರೇಷ್ಠ .
ದೇವರನ್ನು ಪ್ರೀತಿ, ಆದರ, ಆರಾಧನೆಯಿಂದ ಭಜಿಸುತ್ತಾ, ಸತ್ಯ, ಅಹಿಂಸೆ, ದಯೆ, ಶೌಚ (ಪವಿತ್ರತೆ), ಬ್ರಹ್ಮಚಾರ್ಯ, ದಾನ ಇತ್ಯಾದಿಗಳನ್ನು ಆಚರಿಸುತ್ತಾ “ಭಕ್ತಿರೇವ ಗರಿಷ್ಠಾ” ಎಂಬಂತೆ ಭಕ್ತಿ ಪರಾಕಾಷ್ಠತೆಯಲ್ಲಿ ಪರಮಾತ್ಮನಲ್ಲಿ ಶರಣಾಗತಿ ಹೊಂದಿ, ಪಾಪ ಕಾರ್ಯಗಳನ್ನು ನಿಯಂತ್ರಿಸಿ, ಪುಣ್ಯಸಾಧನೆ ಮಾಡಿದಾಗ ಭಗವಂತನನ್ನು ಸಾಕ್ಷಾತ್ಕಾರ ಗಳಿಸಿಕೊಳ್ಳಬಹುದು. “ಸತ್ವ್ವಗುಣ(ಒಳ್ಳೆಯ) ವೃದ್ಧಿ ಮತ್ತು ತಮೋಗುಣ (ದುಷ್ಟಗುಣ) ನಾಶ” ಆಗುವುದೇ ಧರ್ಮ. ವೇದ, ಉಪನಿಷತ್, ಮಹಾಭಾರತ, ರಾಮಾಯಣ ಮತ್ತು ಪುರಾಣಗಳು ಧರ್ಮದ ಪ್ರಧಾನ ಮೂಲಗಳು. ಧರ್ಮವು ಶುದ್ಧ ಜ್ಞಾನವನ್ನು ಬೆಳೆಯಿಸಲು ಸಹಾಯ ಮಾಡುತ್ತದೆ. ಅದರಿಂದ ಧರ್ಮಾಚರಣೆ ಮಾಡುವುದರಿಂದ ಪರಮಾತ್ಮನ ಸಹಜ ಸ್ವರೂಪವನ್ನು ತಿಳಿದುಕೊಳ್ಳಲು ಸಾಧ್ಯ. ಧರ್ಮಾಚರಣೆ ಮಾಡಲು ಜ್ಞಾನ ಬೇಕು. ಜ್ಞಾನ ಸಂಪಾದನೆಗೆ ಗುರುಗಳು ಬೇಕು. ಗುರುಮುಖೇನ ಜ್ಞಾನ ಸಂಪಾದನೆ ನಮ್ಮನ್ನು ಧಾರ್ಮಿಕ ಮಾರ್ಗದಲ್ಲಿ ಇಡಲು ಸಹಾಯ ಮಾಡುತ್ತದೆ. ಜ್ಞಾನ ಪಡೆಯಲು ಮೊದಲು ಮನಸ್ಸಿನಲ್ಲಿ ಜಿಜ್ಞಾಸೆ ಮೂಡಬೇಕು. “ಜಿಜ್ಞಾಸಾ” ಎಂದರೆ ಜ್ಞಾನವನ್ನು ಪಡೆಯಲು ಉಂಟಾಗುವ ಇಚ್ಛೆ (ಅಥವಾ ಪ್ರಶ್ನಾತ್ಮಕ ಚಿಂತನೆ). ಎಂಥಾ ಜ್ಞಾನ ಪಡೆಯಬೇಕು ಎಂದರೆ ದೇವರ ಬಗ್ಗೆ ವಿಶೇಷವಾಗಿ ತಿಳಿದುಕೊಳ್ಳಲು ಸನಾತನ ಹಿಂದೂ ಸಂಸ್ಕೃತಿಯಲ್ಲಿ ವೇದ, ಶಾಸ್ತ್ರಗಳ ಅಭ್ಯಾಸ, ಅಧ್ಯಯನ ಮಾಡುವ ಇಚ್ಛೆ ಮನಸ್ಸಿನಲ್ಲಿ ಮೂಡಬೇಕು.
ಶ್ರೀಮನ್ಮಧ್ವಾಚಾರ್ಯರು ಬ್ರಹ್ಮಸೂತ್ರಭಾಷ್ಯದಲ್ಲಿ ತಿಳಿಸಿದಂತೆ “ಅಥಾತೋ ಬ್ರಹ್ಮ ಜಿಜ್ಞಾಸ:” ಇಲ್ಲಿ ಬ್ರಹ್ಮ ಅಂದರೆ ದೇವರ ಬಗ್ಗೆ ವಿಶೇಷವಾಗಿ ತಿಳಿದು ಆಚರಣೆ ಮಾಡಬೇಕು. ತಿಳಿದು ಮಾಡುವ ಆಚರಣೆಯೇ ಶ್ರೇಷ್ಠ. ಅದಕ್ಕಾಗಿ ಜಿಜ್ಞಾಸೆ ಮಾಡಬೇಕು. ಜಿಜ್ಞಾಸೆ ನಾಲ್ಕು ವಿಧದಲ್ಲಿ ಮಾಡಬೇಕು. ೧.ವಿಷಯ: ಧರ್ಮದ ಶೋಧನೆ ಮಾಡಬೇಕು, ೨. ಸಂಶಯ: ಧರ್ಮವನ್ನು ಹೇಗೆ ತಿಳಿಯಬೇಕು?, ೩.ಪ್ರಯೋಜನ: ಧರ್ಮ ತಿಳಿದು ಮಾಡುವುದರಿಂದ ಆಗುವ ಪ್ರಯೋಜನವೇನು? ೪. ಸಂಬಂಧ: ವೇದಗಳ ಆಧಾರದಲ್ಲಿ ಧರ್ಮವನ್ನು ನಿರ್ಧರಿಸುವ ಪ್ರಕ್ರಿಯೆ.

Previous articleಮುಡಾ ದಾಖಲೆ ಕೊಟ್ಟಿದ್ದು ಕಾಂಗ್ರೆಸ್
Next articleಡಿಡಿಪಿಐ ಕಚೇರಿಯಲ್ಲಿ ವಿದ್ಯುತ್ ಶಾಟ್೯ ಸಕ್ರ್ಯೂಟ್ : ಕಡತ, ಕಂಪ್ಯೂಟರ್ ಭಸ್ಮ