ಗತಾನುಗತಿಕೋ ಲೋಕಃ

0
23

ಪ್ರಸಿದ್ಧವಾದ ಒಂದು ಸುಭಾಷಿತವಿದು. ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ | ಗಂಗಾಸೈಕತ ಲಿಂಗೇನ ನಷ್ಟಮ್ಯತಾಮ್ರಭಾಜನಮ್ ||' ಒಬ್ಬ ಶ್ರದ್ಧಾವಂತನು ಗಂಗಾಸಾಗರಕ್ಕೆ ಯಾತ್ರೆಗೆ ಹೋಗಿದ್ದನು. ಗಂಗೆಯಲ್ಲಿ ಸ್ನಾನಕ್ಕೆ ಇಳಿಯುವ ಮೊದಲು ತನ್ನಲ್ಲಿರುವ ತಾಮ್ರದ ಪಾತ್ರೆಯನ್ನು ಎಲ್ಲಿಟ್ಟು ಹೋಗಲಿ ? ಎಂಬ ಪ್ರಶ್ನೆ ಅವನಿಗೆ ಬಂತು. ಗಂಗೆ ತುಂಬಾ ಅಗಲವಾದ ಹರಿವಿನಲ್ಲಿ ಹರಿಯುತ್ತಿರುವುದರಿಂದ ಕಿಲೋಮೀಟರ್‌ಗಟ್ಟಲೆ ದೂರ ನಡೆದು ಒಬ್ಬ ಮನುಷ್ಯ ಮುಳುಗುವಷ್ಟು ನೀರಿರುವ ಜಾಗಗಳಿಗೆ ಹೋಗಬೇಕಾಗುತ್ತದೆ. ನೀರಿನ ಮಧ್ಯದಲ್ಲೆಲ್ಲೂ ತಾಮ್ರದ ಪಾತ್ರೆ ಇಡಲು ಬರುವುದಿಲ್ಲ. ಹೀಗಾಗಿ ತಾಮ್ರದ ಪಾತ್ರೆಯನ್ನು ಉಸುಕಿನಿಂದ ಕೂಡಿರುವ ದಡದಲ್ಲಿಯೆ ಇಟ್ಟು ಮುಂದೆ ಹೋಗಬೇಕಾಯಿತು. ಅಲ್ಲಿ ಅವನಿಗೆ ಪರಿಚಿತರಾರೂ ಇಲ್ಲ. ಸ್ನಾನ ಮಾಡಿಕೊಂಡು ತಿರುಗಿ ಬರುವಷ್ಟರಲ್ಲಿ ತಾನು ಇಟ್ಟು ಹೋದ ಪಾತ್ರೆಗಳು ಮತ್ತೆ ತನ್ನ ಕೈಗೆ ಸಿಗಬೇಕು, ಕಳ್ಳರ ಕೈಗೆ ಸಿಗಬಾರದು. ಅದಕ್ಕೊಂದು ಉಪಾಯ ಮಾಡಿದ. ತನ್ನ ತಾಮ್ರ ಪಾತ್ರೆಯನ್ನು ಮರಳಿನಲ್ಲಿ ಹೂತಿಟ್ಟು ಅದರ ಮೇಲೆ ಗುರುತಿಗಾಗಿ ಮರಳಿನಲ್ಲಿಯೇ ಶಿವಲಿಂಗದ ಆಕೃತಿಯನ್ನು ಮಾಡಿ ಇಟ್ಟ. ದೇವರ ಆಕೃತಿ ಇದ್ದರೆ ಯಾರೂ ಅದನ್ನು ಮುಟ್ಟಲಾರರು ಎಂಬುದು ಅವನ ಭಾವನೆ. ಗಂಗೆಯ ನೀರಿನೊಳಗೆ ಪ್ರವೇಶ ಮಾಡಿ ಸ್ನಾನ ಮಾಡಿಕೊಂಡು ತಿರುಗಿ ಬಂದು ನೋಡುವಷ್ಟರಲ್ಲಿ ಅಲ್ಲಿ ಅನೇಕ ಶಿವಲಿಂಗಗಳಿದ್ದವು. ದೊಡ್ದ ಸಂಖ್ಯೆಯಲ್ಲಿ ಬಂದ ಜನರೆಲ್ಲರೂ ‘ಮರಳಿನ ಲಿಂಗವನ್ನು ಮಾಡಿ ಪೂಜಿಸುವುದು ಇಲ್ಲಿ ಸಂಪ್ರದಾಯ’ ವೆಂದು ಭಾವಿಸಿಕೊಂಡು ನೂರಾರು ಶಿವಲಿಂಗಗಳನ್ನು ಮಾಡಿಟ್ಟಿದ್ದರು. ಈಗ ಯಾವ ಲಿಂಗದ ಅಡಿ ನನ್ನ ಪಾತ್ರೆ ಇರಬಹುದೆಂದು ಊಹಿಸಲು ಸಾಧ್ಯವೇ ಆಗಲಿಲ್ಲ. ಎಲ್ಲ ಲಿಂಗಗಳನ್ನೂ ಒಡೆದು ಹಾಕಲು ನೋಡುತ್ತಿರುವ ಜನರು ಒಪ್ಪಿಗೆ ಕೊಡುವುದಿಲ್ಲ. ಹೀಗಾಗಿ ತನ್ನ ತಾಮ್ರ ಪಾತ್ರೆ ಇನ್ನು ತನಗೆ ಸಿಗುವುದಿಲ್ಲ ಎಂಬ ಹತಾಶ ಭಾವದಿಂದ ಅಲ್ಲಿಂದ ಹೊರಟನು. ಅವನ ಬಾಯಿಯಿಂದ ಬಂದ ಉದ್ಗಾರವೇ ಈ ಶ್ಲೋಕ.ಗತಾನುಗತಿಕೋ ಲೋಕಃ. ಹಿಂದಿನವರು ನಡೆದ ದಾರಿಯಲ್ಲಿಯೇ ಮುಂದೆ ಬಂದವರು ನಡೆದು ಹೋಗುತ್ತಾರೆ. ಬೇರೆಯವರು ಮಾಡಿದ್ದನ್ನೆ ಇತರರು ಅನುಸರಿಸುತ್ತಾರೆ. ಇದಕ್ಕಿಂತ ಹೊರತಾಗಿ ಹೊಸದನ್ನು ಅಥವಾ ಹೊಸ ದಾರಿಯನ್ನು ಕಂಡುಹಿಡಿಯುವ ಬುದ್ಧಿ ಜನಸಾಮಾನ್ಯರಿಗೆ ಇರುವುದಿಲ್ಲ. ನಾನು ಮಾಡಿಟ್ಟ ಗಂಗಾ ಮರಳಿನ ಲಿಂಗದ ಕಾರಣದಿಂದಲೆ ನನ್ನ ತಾಮ್ರ ಪಾತ್ರೆಯು ಕಾಣೆಯಾಯಿತು.’
ಸಮಾಜದಲ್ಲಿ ಶಾಸ್ತಾçಧಾರವಿಲ್ಲದ ಮೂಢನಂಬಿಕೆಗಳು ಮುಂದುವರಿದುಕೊಂಡು ಹೋಗಲು ಇದೆ ಕಾರಣ.

Previous articleನೀಟ್ ಪರೀಕ್ಷೆ ನೀಟಾಗಿಲ್ಲ ಮರು ಪರಿಶೀಲನೆ ಅಗತ್ಯ
Next articleಚೆಸ್ ವಿಶ್ವಕಪ್: ಫೈನಲ್ ತಲುಪಿ ದಾಖಲೆ ಬರೆದ ಆರ್ ಪ್ರಜ್ಞಾನಂದ