ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಹಿರಿಯ ಸೋದರರಾದ ಸಾಂಬ ಸದಾಶಿವ ಜೋಶಿಯವರು ಇಂದು ಬೆಳಗಿನ ಜಾವ ಮೂರು ಗಂಟೆಗೆ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷಗಳಾಗಿದ್ದವು. ಕಳಸದ ಗುರು ಗೋವಿಂದ ಭಟ್ಟರ ವಂಶದ ಹಿರಿಯರಾಗಿದ್ದ ಸಾಂಬ ಸದಾಶಿವ ಜೋಶಿಯವರು ಖಾದಿ ಗ್ರಾಮೋದ್ಯೋಗ ಆಯೋಗದಲ್ಲಿ ನಿಷ್ಟೆಯಿಂದ ಕಾರ್ಯ ನಿರ್ವಹಿಸಿ ಹೆಸರು ಮಾಡಿದ್ದರು. ಧಾರವಾಡದ ಪ್ರತಿಷ್ಠಿತ ಕೆ.ಇ.ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೂಡ ಅವರು ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ಅನೇಕ ಮಹತ್ವದ ಪ್ರಶಸ್ತಿಗಳು ಅವರನ್ನು ಅರಸಿ ಬಂದರೂ ಕೂಡ ದೇಶ ಸೇವೆ ನನ್ನ ಕರ್ತವ್ಯ ಅದಕ್ಕೆ ಪ್ರಶಸ್ತಿಯನ್ನು ಪಡೆಯುವುದು ಸರಿಯಲ್ಲ ಎಂಬ ನಿರ್ಧಾರವನ್ನು ತಳೆದು ಅವೆಲ್ಲವನ್ನೂ ನಿರಾಕರಿಸಿದ್ದರು.