ಕಲಬುರಗಿ: ರಾಜ್ಯದಾದ್ಯಂತ ಬೆಚ್ಚಿ ಬೀಳಿಸುವಂತಹ ಕಲಬುರಗಿಯ ಮಗು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಮಹಿಳಾ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂವರು ಸಹ ಇಲ್ಲಿನ ಎಂ.ಎಸ್.ಕೆ ಮಿಲ್ ಸಮೀಪದ ಶಾ ಜೀಲಾನಿ ದರ್ಗಾದ ನಿವಾಸಿಯಾಗಿದ್ದು, ಉಮೇರಾ ಆವೇಜ್ ಶೇಖ್, ನಸ್ರೀನ್ ಅಬ್ದುಲ್ ರಹೀಂ ಮತ್ತು ಫಾತೀಮಾ ಫಯಾಜ್ ಶೇಖ್ ಬಂಧಿತ ಆರೋಪಿತರಾಗಿದ್ದಾರೆ ಎಂದು ಹೇಳಿದರು.
ಆರೋಪಿಗಳು ಮಗುವನ್ನು 50 ಸಾವಿರಕ್ಕೆ ಮಾರಾಟ ಮಾಡಲು ಡೀಲ್ ಮಾಡಿದ್ದರು, ಈ ಕುರಿತು ಅವರು ಅಡ್ವಾನ್ಸ್ 25 ಸಾವಿರ ಹಣ ಕೂಡ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಒಬ್ಬ ಮಹಿಳೆಗೆ 7 ವರ್ಷದಿಂದ ಮಗು ಆಗಿರುವುದಿಲ್ಲ, ಆಕೆಯನ್ನು ಮಾರಾಟ ಮಾಡುವುದಕ್ಕೆ ಈ ಮಗುವನ್ನು ಅಪಹರಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.