ಇತಿಹಾಸಪ್ರಜ್ಞೆಯ ಅವಶ್ಯಕತೆ

0
30

ಇತಿಹಾಸ ಪ್ರಜ್ಞೆ ಎಲ್ಲರಿಗೂ ಬೇಕು. ಇತಿ + ಹ + ಆಸ ಎಂದರೆ ಭೂತಕಾಲದ ವಾಸ್ತವಿಕತೆಗಳು. ಅವುಗಳ ಅರಿವು ಮುಂದೆ ಭವಿಷ್ಯತ್ತಿನ ಕಡೆ ಹೆಜ್ಜೆ ಇಡಲು ಶಕ್ತಿ ಕೊಡುತ್ತವೆ. ಇತಿಹಾಸವನ್ನು ಸಂಪೂರ್ಣವಾಗಿ ಮರೆತರೆ ಭವಿಷ್ಯತ್ತು ಕತ್ತಲೆಯಾಗಬಹುದು.
ಮನುಷ್ಯನ ಅಷ್ಟೇ ಅಲ್ಲ ಎಲ್ಲಾ ಪ್ರಾಣಿಗಳ ಸಹಜ ನಡೆಯಲ್ಲೇ ಇತಿಹಾಸ ಪ್ರಜ್ಞೆ ಒಂದಷ್ಟು ಇದ್ದೇ ಇರುತ್ತದೆ. ಎಲ್ಲರೂ ಹಿಂದಿನ ಅನುಭವದ ಆಧಾರದ ಮೇಲೆಯೇ ಮುಂದಿನ ಹೆಜ್ಜೆ ಇಡುತ್ತಾರೆ. ಮನುಷ್ಯನಿಗೆ ಹಿಂದಿನ ನೆನಪು ವಿಶೇಷವಾಗಿ ಇರುತ್ತದೆ. ಆದರೂ ಉಳಿದ ಪ್ರಾಣಿಗಳಿಗೆ ಗತಕಾಲದ ಅರಿವು ಒಂದಷ್ಟು ಇದ್ದೇ ಇರುತ್ತದೆ. ಚಕ್ಕಡಿ ಗಾಡಿಗೆ ಕಟ್ಟಿರುವ ಎತ್ತುಗಳು ತಮ್ಮ ಯಜಮಾನನ ಮನೆಯ ದಾರಿಯನ್ನು ನೆನಪಿಟ್ಟುಕೊಂಡು ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತವೆ. ಹಾವು ತನಗೆ ಕೇಡನ್ನು ಉಂಟು ಮಾಡಿದವನನ್ನು ಹನ್ನೆರಡು ವರ್ಷಗಳವರೆಗೂ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳುತ್ತಾರೆ. ಹೀಗೆ ಪ್ರತಿಯೊಂದು ಪ್ರಾಣಿಯೂ ಸಹಜ ನಡೆಯಲ್ಲಿ ಹಿಂದಿನ ಅನುಭವದ ಆಧಾರದ ಮೇಲೆ ಮುಂದಿನ ಹೆಜ್ಜೆಗಳು ಕಂಡುಬರುತ್ತವೆ.
ಮನುಷ್ಯನು ಪ್ರತಿದಿನ ರಾತ್ರಿ ಆ ದಿನ ತಾನು ನಡೆದ ರೀತಿಯನ್ನು ನೆನಪಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ | ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ ||' ಈ ದಿನದ ನನ್ನ ನಡತೆ ಪಶುಗಳಿಗೆ ಸಮಾನವಾಯಿತೇ ? ಅಥವಾ ಸತ್ಪುರುಷರ ನಡೆಯಾಯಿತೆ? ಎಂಬ ಪ್ರಶ್ನೆಯೊಂದಿಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇಲ್ಲಿ ಆ ದಿನದ ತನ್ನಇತಿಹಾಸ’ದ ಅವಲೋಕನೆಯ ಜೊತೆಗೆ, ಸತ್ಪುರುಷರ ಇತಿಹಾಸ ಚಿಂತನೆಯಿದೆ, ಸತ್ಪುರುಷರ ಇತಿಹಾಸದೊಡನೆ ತನ್ನ ಇತಿಹಾಸದ ತುಲನೆಯಿದೆ. ಇದೂ ಒಂದು ರೀತಿಯ ಇತಿಹಾಸ ಪ್ರಜ್ಞೆಯೇ ಆಗಿದೆ.
ಹಾಗಿದ್ದರೆ ಇತಿಹಾಸವನ್ನು ಓದುವುದು ಬೇಡವೇ? ಬೇಕು. ತುಂಬಾ ಹಿಂದಿನ ಕಾಲದಲ್ಲಿ, ತುಂಬಾ ದೂರದ ಸ್ಥಳಗಳಲ್ಲಿ ನಡೆದ ಘಟನೆಗಳಲ್ಲಿ ನೆನಪಿಡಬೇಕಾದ ಘಟನೆಗಳಿರುತ್ತವೆ. ಎಷ್ಟೋ ಘಟನೆಗಳಲ್ಲಿ ತಾನು ಅನುಸರಿಸಬೇಕಾದ ಆದರ್ಶಗಳಿರುತ್ತವೆ. ಇಂದಿನ ಗೃಹಕೃತ್ಯಗಳಲ್ಲಿ, ಕಾರ್ಯಾಲಯದ ಕೆಲಸಗಳಲ್ಲಿ ಮತ್ತು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಹಿಂದಿನ ಇತಿಹಾಸದ ಪ್ರಭಾವ ಇದ್ದೇ ಇರುತ್ತದೆ.
ಆ ಪ್ರಭಾವದ ಸರಿಯಾದ ಅರಿವು ಇತಿಹಾಸದ ತಿಳಿವಳಿಕೆಯಿಂದ ಮಾತ್ರ ಸಾಧ್ಯ. ಇತಿಹಾಸದ ಈ ಅರಿವಿನಿಂದ ನಮ್ಮ ಆಚರಣೆಗಳನ್ನು ನಾವು ಹೇಗೆ ಉಳಿಸಿಕೊಳ್ಳಬೇಕು, ಗೃಹಕೃತ್ಯಗಳನ್ನು ಮುಂದುವರಿಸಬೇಕು, ಕಾರ್ಯಾಲಯ ಕರ್ತವ್ಯಗಳನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂಬುದು ನಿರ್ಧಾರವಾಗುತ್ತದೆ. ಹೀಗೆ ಇತಿಹಾಸದ ಹೆಜ್ಜೆಗಳಿಂದ ಭವಿಷ್ಯತ್ತಿನ ಬಾಗಿಲುಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಅದಕ್ಕಾಗಿ ಇತಿಹಾಸವನ್ನು ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು, ಇತರರಲ್ಲಿ ಬೆಳೆಸಬೇಕು.

Previous articleದೇಹದ ಅಡಿಪಾಯವಾದ ಪಾದಗಳ ರಕ್ಷಣೆ
Next articleಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ