ಶಹಾಪುರ(ಯಾದಗಿರಿ): ನನ್ನ ಗಂಡ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ನಡಿಹಾಳದ ನೀಲುನಾಯಕ ತಾಂಡಾದ ನಿವಾಸಿ ಮಂಜುಳಾ ಚವ್ಹಾಣ ನಗರದ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಐದು ಜನರ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದಾರೆ. ನ್ಯಾಯಾಧೀಶ ಬಸವರಾಜ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿ ದಾಖಲೆ ಸಲ್ಲಿಸುವಂತೆ ಶನಿವಾರ ಗೋಗಿ ಠಾಣೆಯ ಪಿಎಸ್ ಅವರಿಗೆ ನಿರ್ದೇಶನ ನೀಡಿದ್ದಾರೆ. ತಾಲೂಕಿನ ನಡಿಹಾಳದ ನೀಲು ನಾಯಕ ತಾಂಡಾದ ನಿವಾಸಿಗಳಾದ ಅರ್ಜುನ ಚವ್ಹಾಣ, ಅರುಣ ಚವ್ಹಾಣ, ಅನುಸುಯಾಬಾಯಿ ಚವ್ಹಾಣ, ಕವಿತಾ ಚವ್ಹಾಣ, ಜಯಶ್ರೀ ಚವ್ಹಾಣ ಎನ್ನುವರು ಕೊಲೆಗೈದ ಆರೋಪಿತರೆಂದು ದೂರಿನಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ:
ಕಳೆದ ೨೦೨೪ ಅಕ್ಟೋಬರ್ ೧ರಂದು ಬೆಳಿಗ್ಗೆ ೬.೩೦ರ ಸುಮಾರಿಗೆ ರಾಜು ಚವ್ಹಾಣ ಎನ್ನುವರು ತನ್ನ ಮನೆಯ ಹತ್ತಿರದ ಜಮೀನಿನಲ್ಲಿ ಸಾಲಬಾಧೆಯಿಂದ ವಿಷ ಸೇವಿಸಿಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದರು. ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮೃತನ ಪತ್ನಿ ಮಂಜುಳಾ ದೂರು ದಾಖಲಿಸಿದ್ದರು. ಕೆಲ ದಿನಗಳ ಬಳಿಕ ನನ್ನ ಗಂಡನ ಸಾವಿನ ಬಗ್ಗೆ ನಿಜಾಂಶ ಗೊತ್ತಾಯಿತು. ಏನೆಂದರೆ, ರಾಜು ಚವ್ಹಾಣ ಹಾಗೂ ತಾಂಡಾದ ಮೂವರು ಜನ ಸೇರಿಕೊಂಡು ಅರ್ಜುನ ಚವ್ಹಾಣ ಅವರ ಮನೆಗೆ ತೆರಳಿ ನನ್ನ ಹೆಸರಿನಲ್ಲಿ ಇರುವ ಜಮೀನು ೬.೫೦ ಲಕ್ಷ ರೂ. ಮಾರಾಟವಾಗಿದ್ದ ಹಣ ಕೇಳಲು ಹೋದಾಗ ಗಲಾಟೆಯಾಗಿ ನನ್ನ ಗಂಡನ ಗುಪ್ತಾಂಗಕ್ಕೆ ಐವರು ಹೊಡೆದು ನಂತರ ಬಾಯಿಯಲ್ಲಿ ವಿಷ ಹಾಕಿ ಕೊಲೆ ಮಾಡಿದ್ದಾರೆ. ಕೊಲೆಗೈದ ಸಂಗತಿ ಗೊತ್ತಾಗಬಾರದೆಂದು ತಾವೇ ಆಟೋದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಖಾಸಗಿ ದೂರು ನೀಡಲಾಗಿದೆ ಎಂದು ಫರ‍್ಯಾದಿದಾರ ಪರ ವಕೀಲ ಟಿ. ನಾಗೇಂದ್ರ ತಿಳಿಸಿದ್ದಾರೆ.