ವಜ್ರಾಯುಧದ ಮಹತ್ವ

0
12

ಪರಮಾತ್ಮನ ವಿಭೂತಿಗಳ ಪಟ್ಟಿಯಲ್ಲಿ ಆಯುಧಗಳನ್ನೂ ಸೇರಿಸಲಾಗಿದೆ. ಪ್ರತಿಯೊಂದು ದೇವತೆಯ ಕೈಯಲ್ಲಿರುವ ಪ್ರತಿಯೊಂದು ಆಯುಧವೂ ಒಂದು ದಿವ್ಯ ಶಕ್ತಿಯ ಸಂಕೇತವಾಗಿದೆ. ಉದಾಹರಣೆಗೆ ವಿಷ್ಣುವಿನ ಕೈಯಲ್ಲಿರುವ ಶಂಖವು ನಾದದ ಸಂಕೇತವಾದರೆ, ಚಕ್ರವು ಜ್ಯೋತಿಯ ಸಂಕೇತವಾಗಿದೆ. ಪಾಶವು ರಾಗದ ಸಂಕೇತವಾದರೆ ಅಂಕುಶವು ಕ್ರೋಧದ ಸಂಕೇತವಾಗಿದೆ. ಹೀಗೆ ಎಲ್ಲ ಆಯುಧಗಳಿಗೂ ಬೇರೆ ಬೇರೆ ಅರ್ಥ ವಿವರಣೆ ಇದೆ. ವಜ್ರಾಯುಧವು ಎಲ್ಲ ಆಯುಧಗಳಿಗಿಂತಲೂ ಶ್ರೇಷ್ಠ.
ಇಂದ್ರನು ಅದನ್ನು ಧರಿಸಿರುತ್ತಾನೆ. ಇಂದ್ರನಿಗೆ ವೃತ್ರಾಸುರನನ್ನು ಸಂಹಾರ ಮಾಡಲು ವಜ್ರಾಯುಧವೇ ಬೇಕಾಯಿತು. ದಿವ್ಯಶಕ್ತಿಯಿಂದ ಕೂಡಿದ ಈ ಆಯುಧ ಪರಮಾತ್ಮನ ಒಂದು ಸ್ವರೂಪವೆಂದು ತಿಳಿಯಬೇಕು ಎಂಬುದು ‘ಆಯುಧಾನಾಮಹಂ ವಜ್ರಮ್’ ಎಂಬ ಮಾತಿನ ಅರ್ಥ.
ತ್ವಷ್ಟೃ ಮಹರ್ಷಿಯ ಮಗನಾದ ವಿಶ್ವರೂಪನನ್ನು ದೇವೇಂದ್ರನು ಸಂಹಾರ ಮಾಡಬೇಕಾಯಿತು. ಏಕೆಂದರೆ ಆತ ಯಜ್ಞ ಮಾಡುವಾಗ ಪರೋಕ್ಷವಾಗಿ ಅಸುರರಿಗೆ ಯಜ್ಞ ಭಾಗವನ್ನು ಸಲ್ಲಿಸುತ್ತಿದ್ದ. ಹೀಗೆ ಆತ ಮಾಡಲು ಕಾರಣವೇನೆಂದರೆ, ಆತನ ತಾಯಿ ಅಸುರ ಕುಲದಿಂದ ಬಂದವಳಾದ್ದರಿಂದ ಆತನಿಗೆ ಅಸುರರ ಮೇಲೆ ಮಮಕಾರವಿತ್ತು. ಆದ್ದರಿಂದ ಇಂದ್ರನು ವಿಶ್ವ ರೂಪನ ಶಿರಗಳನ್ನು (ಅವನಿಗೆ ಮೂರು ತಲೆಗಳಿದ್ದವು. ಇದರ ಸಾಂಕೇತಿಕ ತಾತ್ಪರ್ಯ ಬೇರೆಯೇ ಇದೆಯೆಂದು ವಿದ್ವಾಂಸರು ಹೇಳುತ್ತಾರೆ.) ಕತ್ತರಿಸಿ ಅವನನ್ನು ಸಂಹಾರ ಮಾಡಿದನು. ಇದರಿಂದ ಕೋಪಗೊಂಡ ತ್ವಷ್ಟೃ ಮಹರ್ಷಿಯು ಇಂದ್ರನನ್ನೇ ಸಂಹಾರ ಮಾಡುವ ಉದ್ದೇಶದಿಂದ ಮಾಡಿದ ಯಜ್ಞಕುಂಡದಿಂದಲೇ ವೃತ್ರನೆಂಬ ಘೋರರೂಪಿ ಅಸುರನು ಹುಟ್ಟಿದನು. ಅವನು ದೇವತೆಗಳನ್ನು ಪೀಡಿಸತೊಡಗಿದನು.
ಅವನನ್ನು ಸಂಹಾರ ಮಾಡುವುದಕ್ಕೋಸ್ಕರ ದೇವತೆಗಳೆಲ್ಲರೂ ಶ್ರೀಹರಿಯಲ್ಲಿ ಪ್ರಾರ್ಥಿಸಿಕೊಂಡಾಗ, ಶ್ರೀಹರಿಯು ಅವನನ್ನು ಸಂಹರಿಸಲು ವಜ್ರಾಯುಧವೇ ಬೇಕೆಂದು ಹೇಳಿದನು. ತಪಸ್ವಿಯಾದ ದಧೀಚಿ ಮಹರ್ಷಿಯ ಶರೀರದ ಅಸ್ಥಿಯಿಂದ ಅದನ್ನು ಮಾಡಬೇಕೆಂದು ದೇವತೆಗಳಿಗೆ ಸೂಚಿಸಿದನು. ದೇವತೆಗಳೆಲ್ಲರೂ ಬಂದು ದಧೀಚಿ ಮಹರ್ಷಿಗಳನ್ನು ಇದಕ್ಕಾಗಿ ಪ್ರಾರ್ಥಿಸಿಕೊಂಡಾಗ, ಲೋಕ ಹಿತಕ್ಕೋಸ್ಕರ, ಮತ್ತು ಶ್ರೀಹರಿಯ ಮಾತಿಗೋಸ್ಕರ ಅವರು ತಮ್ಮ ಶರೀರವನ್ನು ದೇವತೆಗಳಿಗೆ ಕೈಕೊಟ್ಟರು. ಯೋಗ ಸಮಾಧಿಯಿಂದ ತಾನು ಶರೀರ ತ್ಯಾಗ ಮಾಡಿ ಆ ಶರೀರದ ಅಸ್ಥಿಗಳಿಂದ ವಜ್ರಾಯುಧವನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ವಿಶ್ವಕರ್ಮನ ಮೂಲಕ ಆ ದೇವತೆಗಳು ಅಸ್ಥಿಯಿಂದ ವಜ್ರಾಯುಧವನ್ನು ನಿರ್ಮಿಸಿಕೊಂಡರು. ಅದರಿಂದ ವೃತ್ರಾಸುರನನ್ನು ಇಂದ್ರನು ಸಂಹಾರ ಮಾಡಿದನು.
ಮನುಷ್ಯನ ಬೆನ್ನುಹುರಿ ಅನೇಕ ರಹಸ್ಯಗಳನ್ನೊಳಗೊಂಡಿದೆ. ಯೋಗಶಾ ಮತ್ತು ತಂತ್ರಶಾಸ್ತ್ರದಲ್ಲಿ ಹೇಳುವ ಷಟ್‌ಚಕ್ರಗಳು ಬೆನ್ನುಹುರಿಯ ಒಳಗೆ ಕೇಂದ್ರಿತವಾಗಿವೆ. ಇಡಾ-ಪಿಂಗಳಾ-ಸುಷುಮ್ಮಾ ಮುಂತಾದ ನಾಡಿಗಳು ಬೆನ್ನುಹುರಿಯ ಒಳಗೇ ಇರುತ್ತವೆ. ದಧೀಚಿ ಮಹರ್ಷಿಯ ಬೆನ್ನುಹುರಿಯಿಂದ ನಿರ್ಮಿಸಿದ ವಜ್ರಾಯುಧದಿಂದ ವೃತಾಸುರನನ್ನು ಕೊಂದ ಕಥೆಯು ಆಧ್ಯಾತ್ಮಿಕ ರಹಸ್ಯವೊಂದರ ಕಥಾರೂಪವೆಂದು ವಿದ್ವಾಂಸರು ಹೇಳುತ್ತಾರೆ. ಅಂದರೆ ಸಾಧನೆಯ ಮೂಲಕ ಷಟ್‌ಚಕ್ರಗಳನ್ನು ಜಾಗೃತಗೊಳಿಸಿಕೊಂಡ ಯೋಗಿಯು ವೃತ್ರಾಸುರನಂಥ ಯಾವುದೆ ಧರ್ಮವಿರುದ್ಧ ಶಕ್ತಿಯನ್ನು ಗೆಲ್ಲಬಲ್ಲನು. ಈ ಅರ್ಥದಲ್ಲಿ ಗಮನಿಸಿದಾಗ ಯೋಗಿಯ ಬೆನ್ನುಹುರಿಯೇ ವಜ್ರಾಯುಧ, ಅದು ಭಗವತ್ ಸ್ವರೂಪವೆಂಬುದು ಅರ್ಥವಾಗದಿರದು.

Previous articleನಮ್ಮೂರ ಮಹಾತ್ಮೆ
Next articleಬಾಲಿವುಡ್​ ನಟಿ ವಹೀದಾ ರೆಹಮಾನ್​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ