ವಚನ ಪಾಲನೆ ಒಂದು ಪರಾಕ್ರಮ

0
33

ವಚನ ಕೊಟ್ಟು ಪಾಲಿಸುವುದೆಂದರೆ ಅದೆಷ್ಟು ಸಾಹಸದ, ಕಷ್ಟದ ಕೆಲಸವೆಂಬುದು ವಚನ ಪಾಲಿಸಿದವರಿಗೆ ಗೊತ್ತು. ಕೆಲವರು ಸಹಜವಾಗಿ ಅಭಯ ನೀಡುತ್ತಾರೆ, ಮಾತು ಕೊಡುತ್ತಾರೆ, ವಚನ ಕೊಡುತ್ತಾರೆ, ನಾನಿದ್ದೀನಲ್ಲ ಎಂದು ಹೇಳಿ ಬಿಡುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಮರೆತುಬಿಡುತ್ತಾರೆ. ವಚನ ಕೊಟ್ಟಾಗ ಅದನ್ನು ಪಾಲಿಸಲೇಬೇಕು ಎಂಬ ಆಜ್ಞೆಯನ್ನು ಎಲ್ಲಾ ಧರ್ಮಗಳು ಸಾರಿವೆ.
ವಚನ ಪಾಲಿಸುವವನು ವಚನ ಕೊಡುವಾಗ ಯೋಚಿಸಿ ಸಾವಧಾನದಿಂದ ವಚನ ಕೊಡುತ್ತಾನೆ. ಆಗ ಆತನ ವಚನ ಪರಿಪಾಲನೆ ಪರಿಣಾಮಕಾರಿಯಾಗಿರುತ್ತದೆ. ಒಬ್ಬ ದಾರ್ಶನಿಕರು ಹೇಳುತ್ತಾರೆ. ಅವಸರದಲ್ಲಿ ಮಾಡಿದ ವಚನ ಶಾಂತವಾದ ಮೇಲೆ ಮರೆತು ಹೋಗುತ್ತದೆ ಎಂದು. ನೆನಪಿಸಿಕೊಂಡು ವಚನ ಪಾಲಿಸುವವನು ಅತ್ಯಂತ ಮೇಧಾವಿ ವ್ಯಕ್ತಿಯಾಗಿರುತ್ತಾನೆ.
ಕುರಾನಿನ ಬನಿ ಇಸ್ರಾಯಿಲ್ ಅಧ್ಯಾಯದ ೩೪ನೇ ವಚನದಲ್ಲಿ ಈ ಆಜ್ಞೆ ನೋಡಿ ನೀವು ವಚನವನ್ನು ಪರಿಪಾಲಿಸಿರಿ, ನೀವು ಕೊಟ್ಟ ವಚನವನ್ನು ಕುರಿತು ಖಂಡಿತವಾಗಿಯೂ ನ್ಯಾಯ ನಿರ್ಣಯದ ದಿನ ನಿಮ್ಮನ್ನು ವಿಚಾರಿಸಲಾಗುವುದು. ವಚನ ಕೇವಲ ನಿಮ್ಮ ಶಾಸ್ತ್ರದ ಭಾಗವಲ್ಲ. ಇದು ಜವಾಬ್ದಾರಿಯುತ ಪ್ರತಿಜ್ಞೆಯಾಗಿದೆ. ಇದಕ್ಕಾಗಿ ಮನುಷ್ಯ ದೇವರ ಎದುರಿಗೆ ಜವಾಬ್ದಾರನಾಗಿ ನಿಲ್ಲುತ್ತಾನೆ. ವಚನಭಂಗ ಮಾಡುವುದು ದೊಡ್ಡ ತಪ್ಪು. ಅದು ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. ವಚನಭಂಗ ಹಾಗೂ ಆಧ್ಯಾತ್ಮಿಕತೆ ಎರಡು ಒಂದೆಡೆಗೆ ಇರಲು ಸಾಧ್ಯವಿಲ್ಲ ಪ್ರವಾದಿವರ್ಯ ಮೊಹಮ್ಮದ್ (ಸ)ಅವರ ಈ ಹದೀಸ್ ನೋಡಿ..ವಚನ ಪಾಲನೆ ಇಲ್ಲದವನಲ್ಲಿ ಧರ್ಮ ಇರುವುದಿಲ್ಲ’ (ಅನಸ್). ಇನ್ನು ಮುಂದೆ ಹೋಗಿ ಪ್ರವಾದಿವರ್ಯರು ವಚನ ಪಾಲನೆ ಒಬ್ಬ ವ್ಯಕ್ತಿಯ ಸತ್ಯತೆ, ವಿಶ್ವಾಸ ಮತ್ತು ಧರ್ಮದೊಂದಿಗೆ ಅವನ ಸಂಬಂಧದ ಸ್ವರೂಪವನ್ನು ಅಳೆಯುವ ಮಾನದಂಡವಾಗಿದೆ ಎನ್ನುತ್ತಾರೆ. ಮಾತುಕೊಟ್ಟು ಅದನ್ನು ಪಾಲಿಸದೇ ಇರುವವನು ಚಾರಿತ್ಯ ಹೀನನಾಗಿರುತ್ತಾನೆ. ವಚನಭಂಗ ಮಾಡಿದವನನ್ನು ನ್ಯಾಯ ನಿರ್ಣಯದ ದಿನ ಗುರುತಿಸಿ ಬಹಿರಂಗವಾಗಿ ವಿಚಾರಣೆಗೆ ಒಳಪಡಿಸಲಾಗುವುದು.ನಿಮಗೆ ಆಗದೇ ಇದ್ದುದ್ದನ್ನು ನೀವು ಮಾಡದೇ ಇದ್ದುದ್ದನ್ನು ಹೇಳುವುದು ಅಲ್ಲಾಹನ ದೃಷ್ಟಿಯಲ್ಲಿ ಅಪ್ರಿಯವಾಗಿದೆ (ಅಸ್ಸಫ್ಟ ೬೧:೩೦).
ವಚನ ಪಾಲಿಸುವವನಿಗೆ ಸಮಾಜದಲ್ಲಿ ಹೆಚ್ಚಿನ ಗೌರವಾದರಗಳು ಇರುತ್ತವೆ. ಆತನಿಗೆ ಒಂದು ವಿಶಿಷ್ಟ ವ್ಯಕ್ತಿತ್ವ ಇರುತ್ತದೆ. ಇದನ್ನು ಕಳೆದು ಕೊಂಡರೆ ಅವನು ಸಮಾಜದಲ್ಲಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಂತೆ. ವಚನ ಪರಿಪಾಲನೆ, ವಾಗ್ದಾನ, ಅಭಯ ಕುರಿತು ಕುರಾನಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಧ್ಯಾಯಗಳ ಅನೇಕ ವಚನಗಳಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲಾಹನು ಸನ್ಮಾರ್ಗಿಗಳಿಗೆ ಇಹಪರ ಲೋಕದ ಎಲ್ಲಾ ಸಂತೋಷದ ನೆಮ್ಮದಿಯ ಜೀವನಕ್ಕೆ ಅಭಯ ನೀಡಿದ್ದಾನೆ. ವಚನ ಪಾಲಿಸಲು ಯೋಗ್ಯತೆ ಇದ್ದರೆ ಅದು ಸಾಧ್ಯವಾಗುತ್ತಿದ್ದರೆ ಮಾತ್ರವಚನ ಕೊಡಿ. ವಚನ ಪರಿಪಾಲನೆ ಮಾಡುವವನು ಅಲ್ಲಾಹನ ಪ್ರೀತಿಗೆ ಪಾತ್ರನಾಗುತ್ತಾನೆ.

Previous articleಸೋಲಾರ್ ಪ್ಲಸ್ ಬ್ಯಾಟರಿ ಕ್ರಾಂತಿಕಾರಿ ಹೆಜ್ಜೆ
Next articleಅನ್ನಚಕ್ರ ಪೋರ್ಟಲ್‌ಗೆ ಚಾಲನೆ