ಬೆಂಗಳೂರು: ಪ್ರಚಾರದ ಕಾರಣಕ್ಕಾಗಿ ಬರ ಅಧ್ಯಯನ ಮಾಡುವುದರಿಂದ ಬಂದ ಭಾಗ್ಯವೇನು? ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು “ಅಧಿಕಾರ ಇಲ್ಲದ ಸಮಯದಲ್ಲೂ ಬಿಜೆಪಿ ಹಾಗೂ ಜೆಡಿಎಸ್‌ನವರು ರೈತರ ಮೇಲೆ ತುಂಬಾ ಅನುಕಂಪ ಇಟ್ಟು ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಆದರೆ ಈಗಾಗಲೇ ಕರ್ನಾಟಕ ಸರ್ಕಾರ ವಿಸ್ತೃತ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ನೀಡಿದ್ದು, ಕೇಂದ್ರವು ವರದಿ ಸ್ವೀಕರಿಸಿ ಅಧಿಕಾರಿಗಳನ್ನು ಕಳಿಸಿಕೊಟ್ಟಿದೆ. 26 ಜನ ಎಂಪಿಗಳು ದಿಲ್ಲಿಗೆ ಹೋಗಿ ಮೊದಲು ಪ್ರಧಾನಿ ಹಾಗೂ ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದ ರೈತರಿಗೆ ಬರ ಪರಿಹಾರ ಕೊಡಿಸಬೇಕು.ಅದು ಬಿಟ್ಟು ಪ್ರಚಾರದ ಕಾರಣಕ್ಕಾಗಿ ಬರ ಅಧ್ಯಯನ ಮಾಡುವುದರಿಂದ ಬಂದ ಭಾಗ್ಯವೇನು?
ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತೆ ಬರ ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರವು 800 ಕೋಟಿ ರೂಪಾಯಿ ಹಣವನ್ನು ಬರ ಪರಿಹಾರಕ್ಕಾಗಿ ನೀಡಿದೆ. 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ನರೇಗಾ ಯೋಜನೆಯ ಮಾನವ ದಿನಗಳನ್ನು 150 ದಿನಕ್ಕೆ ವಿಸ್ತರಿಸುವುದು ಕಡ್ಡಾಯ. ಬರ ಬಂದು 2ರಿಂದ 3 ತಿಂಗಳು ಕಳೆದರೂ ಇನ್ನೂ ಕೂಡ ಕೇಂದ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯ 26 ಎಂಪಿಗಳು, 65ಜನ ಶಾಸಕರು ಹಾಗೂ ಅವರ ನೆಂಟಸ್ಥನದಲ್ಲಿರುವ ಜೆಡಿಎಸ್‌ನ 19 ಶಾಸಕರು ಕರ್ನಾಟಕದ ರೈತರಿಗೆ ಹಣ ಬಿಡುಗಡೆ ಮಾಡಲು, ನರೇಗಾ ಯೋಜನೆಯ ಮಾನವ ದಿನಗಳನ್ನು ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದಿದ್ದಾರೆ.