ಬೆಂಗಳೂರು: ಕರ್ನಾಟಕ ಸರ್ಕಾರ ಈ ಹಿಂದೆ ಘೋಷಣೆ ಮಾಡಿದಂತೆ ಮಲ್ಟಿಪ್ಲೆಕ್ಸ್ ಸೇರಿ ರಾಜ್ಯಾದ್ಯಂತ ಸಿನಿಮಾ ಟಿಕೆಟ್ ದರವನ್ನು ಏಕರೂಪಗೊಳಿಸಿ ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿದ ಬಳಿಕ ಈ ಕುರಿತು ಅಂತಿಮ ಆದೇಶ ಪ್ರಕಟವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್‌ನಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಏಕರೂಪದ ಟಿಕೆಟ್ ದರ ಜಾರಿ ಘೋಷಣೆ ಮಾಡಿದ್ದರು. ಈ ಘೋಷಣೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಈಗ ಸರ್ಕಾರ ಎಲ್ಲಾ ತೆರಿಗೆ ಸೇರಿ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರಬಾರದು ಎಂದು ಅಧಿಸೂಚನೆಯಲ್ಲಿ ಹೇಳಿದೆ. ಈ ಪ್ರಸ್ತಾವನೆಗೆ ಚಿತ್ರಮಂದಿರದ ಮಾಲೀಕರು, ಮಲ್ಟಿಪ್ಲೆಕ್ಸ್ ಮಾಲೀಕರು ಆಕ್ಷೇಪಣೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ನಿಯಮಗಳಿಗೆ ತಿದ್ದುಪಡಿ: ಕರ್ನಾಟಕ ಸರ್ಕಾರ ಏಕರೂಪ ಸಿನಿಮಾ ದರ ಜಾರಿಗೊಳಿಸಲು ಕಾನೂನು ತಿದ್ದುಪಡಿ ತರಲಿದೆ. ಕರ್ನಾಟಕ ಸಿನಿಮಾಸ್ (ನಿಯಂತ್ರಣ) ನಿಯಮಗಳು, 2014 ಅನ್ನು ತಿದ್ದುಪಡಿ ಮಾಡಲಾಗುತ್ತದೆ.
ಈ ಅಧಿಸೂಚನೆಯನ್ನು ಕರ್ನಾಟಕ ಸಿನಿಮಾಸ್ (ನಿಯಂತ್ರಣ) ಕಾಯ್ದೆ, 1964 (ಕರ್ನಾಟಕ ಕಾಯ್ದೆ 23, 1964)ರ ಸೆಕ್ಷನ್ 19ರ ಮೂಲಕ ನೀಡಲಾದ ಅಧಿಕಾರದ ಮೂಲಕ ಪ್ರಸ್ತಾಪಿಸಲಾಗಿದೆ. ಈ ಅಧಿಸೂಚನೆಗೆ ಆಕ್ಷೇಪಣೆಗಳಿದ್ದರೆ 15 ದಿನದಲ್ಲಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಬಳಿಕ ಬರುವ ಆಕ್ಷೇಪಣೆಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ತಿಳಿಸಿದೆ.
ಕರ್ನಾಟಕ ಚಲನಚಿತ್ರ (ನಿಯಂತ್ರಣ) (ತಿದ್ದುಪಡಿ) ಮಸೂದೆ-2025 ಪ್ರಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಅನ್ಯಭಾಷೆಯ ಚಿತ್ರಗಳಿಗೂ ಅನ್ವಯವಾಗುವಂತೆ ಎಲ್ಲಾ ತೆರಿಗೆ ಸೇರಿ ಗರಿಷ್ಠ ದರ 200 ರೂ. ವಿಧಿಸಬಹುದು. ಇದರಿಂದಾಗಿ ಪರ ಭಾಷೆಯ ಚಿತ್ರಗಳು ಬಂದಾಗ ಭಾರೀ ಟಿಕೆಟ್ ದರವನ್ನು ಪಡೆಯುತ್ತಿದ್ದ ಮಲ್ಟಿಪ್ಲೆಕ್ಸ್‌ಗಳಿಗೆ ಕಡಿವಾಣ ಬೀಳಲಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ ಅಧಿಕವಾಗಿದೆ. ಆದ್ದರಿಂದ ಜನರು ಸಿನಿಮಾ ನೋಡಲು ಬರುತ್ತಿಲ್ಲ. ಆದ್ದರಿಂದ ಟಿಕೆಟ್ ದರ ಏರಿಕೆಗೆ ಕಡಿವಾಣ ಹಾಕಬೇಕು ಎಂದು ನಿರ್ಮಾಪಕರು, ನಿರ್ದೇಶಕರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು.
ಕರ್ನಾಟಕ ಸರ್ಕಾರ ಈ ಹಿಂದೆ 2017ರಲ್ಲಿಯೂ ಏಕರೂಪ ಸಿನಿಮಾ ದರದ ಕುರಿತು ಆದೇಶವನ್ನು ಪ್ರಕಟಿಸಿತ್ತು. ಆಗ ಇದನ್ನು ವಾಪಸ್ ಪಡೆದುಕೊಳ್ಳಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಕೋರ್ಟ್ ಆದೇಶದಂತೆ ಸರ್ಕಾರ ಆದೇಶವನ್ನು ವಾಪಸ್ ಪಡೆದಿತ್ತು.
ಈ ವರ್ಷ ವಿಧಾನ ಪರಿಷತ್ ಕಲಾಪದಲ್ಲಿ ಪುನಃ ಏಕರೂಪದ ಸಿನಿಮಾ ದರದ ಜಾರಿಗೆ ಒತ್ತಾಯಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಈಗ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂತಿಮ ಆದೇಶ ಪ್ರಕಟವಾಗಬೇಕಿದೆ.