ಹೈಕಮಾಂಡ್ ಮುಂದೆ ಸಿಎಂ ಬದಲಾವಣೆ ಚರ್ಚೆ: ಯತೀಂದ್ರ ಹೇಳಿದ್ದೇನು?

ಮೈಸೂರು: ಮುಖ್ಯಮಂತ್ರಿಗಳ ಬದಲಾವಣೆ, ಅಧಿಕಾರ ಹಸ್ತಾಂತರ, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಕರ್ನಾಟಕ ಕಾಂಗ್ರೆಸ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವು ಶಾಸಕರು, ಸಚಿವರು ಈ ಕುರಿತು ಬಹಿರಂಗ ಹೇಳಿಕೆ ನೀಡಿ, ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಸಹ ಗುರಿಯಾಗಿದ್ದಾರೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ. “ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್‌ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಓಬಿಸಿ ಸಮಿತಿಗೆ ಸಿಎಂ ಆಯ್ಕೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದರು. “ಯಾರು ಹೇಳಿದ್ದು ಮುಖ್ಯಮಂತ್ರಿ ಆದವರನ್ನು ಓಬಿಸಿ ಕಮಿಟಿಗೆ ಕಳುಹಿಸಿದರೆ ಪ್ರಮೋಷನ್? ಅಂತ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿ ಹೇಳುವುದನ್ನು ಎಲ್ಲಾ ನೀವು ನಂಬಿದರೆ ಆಗಲ್ಲ. ನಮ್ಮ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತದೆ, ಸಿಎಂ ಬದಲಾಗುತ್ತಾರೆ ಅಂತಿದ್ದಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಸುತ್ತಾರೆ. ಹಾಗಾಗಿ ಸಿಎಂ ಆಸೆ ಇಟ್ಟುಕೊಂಡಿರೋರು ಕೇಳುತ್ತಾರೆ. ಆದರೆ ಕೇಳುವದರಲ್ಲಿ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸರ್ಕಾರ ಬಂದಾಗಿನಿಂದ ಈ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೇನೆ. ದಯವಿಟ್ಟು ಆ ಪ್ರಶ್ನೆ ಕೇಳಬೇಡಿ” ಎಂದು ಯತೀಂದ್ರ ಮನವಿ ಮಾಡಿದರು.

ಇನ್ನೂ ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, “ಇದನ್ನು ಈಗ ಮಾತ್ರವಲ್ಲ, ಕಳೆದ ಬಾರಿ ಭಾಗ್ಯಗಳನ್ನು ಕೊಟ್ಟಾಗಲೂ ಹೇಳುತ್ತಿದ್ದರು. ಯಾರೂ ಸೋಮಾರಿಗಳಾಗಲ್ಲ, ಬಡವರು ಹೊಟ್ಟೆ ತುಂಬಾ ಊಟ ಮಾಡಿ ಸೋಮಾರಿ ಆಗುವುದಿಲ್ಲ” ಎಂದರು.

“ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲವೂ ಸಿಗುತ್ತದೆಯೇ?. ಜೀವನಕ್ಕಾಗಿ ಅವರೂ ದುಡಿಯುತ್ತಾರೆ. ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರುವವರು ಹೇಳುವ ಮಾತುಗಳು ನೀವು ಅವರ ಬದಲು ಇದೇ ಪ್ರಶ್ನೆಯನ್ನು ಶ್ರೀಮಂತರ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ಕೇಳಿ” ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿದ್ದಾರೆ. ಹೈಕಮಾಂಡ್ ನಾಯಕರನ್ನು ಇಂದು ಭೇಟಿಯಾಗುವ ನಿರೀಕ್ಷೆ ಇದೆ. ಇಂತಹ ಹೊತ್ತಿನಲ್ಲಿಯೇ ಮುಖ್ಯಮಂತ್ರಿಗಳ ಪುತ್ರ ಸಿಎಂ ಬದಲಾವಣೆ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.