ಗಣೇಶ್ ರಾಣೆಬೆನ್ನೂರು
ಚಿತ್ರ: ಉಸಿರು
ನಿರ್ದೇಶನ: ಪನೇಮ್ ಪ್ರಭಾಕರ್
ನಿರ್ಮಾಣ: ಲಕ್ಷ್ಮೀ ಹರೀಶ್
ತಾರಾಗಣ: ತಿಲಕ್, ಪ್ರಿಯಾ ಹೆಗ್ಡೆ, ರಾಘು ರಾಮನಕೊಪ್ಪ, ಬಲರಾಜ್ ವಾಡಿ ಹಾಗೂ ರಘು ಪಾಂಡೇಶ್ವರ್ ಮತ್ತಿತರರು.
ಉಸಿರೇ… ಉಸಿರೇ… ಈ ಉಸಿರ ಕೊಲ್ಲಬೇಡ… ಹೀಗೊಂದು ಹಾಡು ಸಿನಿಮಾದಲ್ಲಿ ಆಗಾಗ ಹಿನ್ನೆಲೆ ಸಂಗೀತಕ್ಕೆ ಬಳಸಿಕೊಳ್ಳಬಹುದಿತ್ತು. ಚಿತ್ರತಂಡ ಹಾಗೆ ಮಾಡಿಲ್ಲವಾದರೂ, ಸಾಕಷ್ಟು ಗರ್ಭಿಣಿಯರ ಸರಣಿ ಕೊಲೆಗಳಾದಾಗ, ಹಠಾತ್ತನೇ ಉಸಿರು ಚೆಲ್ಲಿದಾಗ, ಆಯಾ ಗರ್ಭಿಣಿಯೊಳಗಿನ ಕಂದಮ್ಮಗಳು ಹೀಗೆ ಮರುಗಿರಬಹುದೇನೋ ಎಂದೆನಿಸುವುದರಲ್ಲಿ ಸಂಶಯವಿಲ್ಲ. ಹಾಗಾಗುವ ಸಂಭವವಿದೆ. ಹೀಗಾಗಿ ಆಗಾಗ `ಉಸಿರು’ ಬಿಗಿ ಹಿಡಿದುಕೊಳ್ಳಬೇಕು..!
ಆ ಊರಿನಲ್ಲಿ ಒಂದರ ಹಿಂದೊಂದರಂತೆ ಕೊಲೆಯಾಗುತ್ತಿರುತ್ತದೆ. ಅದರಲ್ಲೂ ಗರ್ಭಿಣಿಯರದ್ದೇ ಸರಣಿ ಹತ್ಯೆಯಾಗುತ್ತಿರುತ್ತದೆ. ಇದರ ಹಿಂದೆ ಯಾರಿದ್ದಾರೆ..? ಯಾಕಾಗಿ ಕೊಲೆಯಾಗುತ್ತಿವೆ ಎಂದು ಬೇಧಿಸಲು ಹೊರಟ ತನಿಖಾಧಿಕಾರಿಯ ಮಡದಿಗೇ ಕುತ್ತು ಎದುರಾದರೇ ಆತ ಸುಮ್ಮನಿರುವುದಾದರೂ ಹೇಗೆ..? ಅಲ್ಲಿಂದ ಕಥೆ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ.
ಫಸ್ಟ್ ಹಾಫ್‌ನಲ್ಲಿ ನಡೆಯುವ ಕೆಲವು ಕೊಲೆಗಳು ಹಾಗೂ ಸೆಕೆಂಡ್ ಹಾಫ್‌ನಲ್ಲಿ ಘಟಿಸುವ ಸಾಕಷ್ಟು ಘಟನೆಗಳ ಜಾಡು ಹುಡುಕುತ್ತಾ ಹೊರಡುವ ಪೊಲೀಸ್ ಅಧಿಕಾರಿಗೆ ಸಾಕಷ್ಟು ಸುಳಿವುಗಳು ಸಿಗುತ್ತವೆ. ಅವೆಲ್ಲದಕ್ಕೂ ಸೂತ್ರದಾರ ಒಬ್ಬನೇನಾ..? ಅಷ್ಟಕ್ಕೂ ಬರೀ ಗರ್ಭಿಣಿಯರನ್ನು ಮಾತ್ರ ಯಾಕೆ ಕೊಲ್ಲುತ್ತಿದ್ದ ಎಂಬುದಕ್ಕೆ ಸಿನಿಮಾ ಕೊನೆಯಲ್ಲಿ ಉತ್ತರ ಸಿಗುತ್ತದೆ. ಅಲ್ಲೀಯವರೆಗೂ ಉಸಿರು ಚೆಲ್ಲಿದವರ ಕಥೆ-ವ್ಯಥೆ ಬಹಿರಂಗವಾಗುತ್ತದೆ. ಆಗ ನೋಡುಗರೂ ನಿಟ್ಟುಸಿರು ಬಿಡಬಹುದು..!
ಒಂದು ಥ್ರಿಲ್ಲರ್ ಅಥವಾ ಮರ್ಡರ್ ಮಿಸ್ಟರಿ ಸಿನಿಮಾಕ್ಕೆ ಬೇಕಾದ ಕೆಲವು ಅಂಶಗಳನ್ನು ಅಳವಡಿಸಿಕೊಂಡಿದ್ದರೆ, ಉಸಿರು ಮತ್ತಷ್ಟು ಚೈತನ್ಯ ಭರಿತವಾಗುವ ಲಕ್ಷಣಗಳಿರುತ್ತಿದ್ದವು. ಅದಾಗ್ಯೂ ಇರುವ ಸಾಮಗ್ರಿಗಳಲ್ಲೇ ಅಚ್ಚುಕಟ್ಟಾದ ಅಡುಗೆ ಮಾಡಲು ಪ್ರಯತ್ನಿಸಿದಾರೆ ನಿರ್ದೇಶಕ ಪನೇಮ್ ಪ್ರಭಾಕರ್. ಪೊಲೀಸ್ ಅಧಿಕಾರಿಯಾಗಿ ತಿಲಕ್ ಗಮನ ಸೆಳೆಯುತ್ತಾರೆ. ಪ್ರಿಯಾ ಹೆಗ್ಡೆ, ರಾಘು ರಾಮನಕೊಪ್ಪ, ಬಲರಾಜ್ ವಾಡಿ ಹಾಗೂ ರಘು ಪಾಂಡೇಶ್ವರ್ ಮತ್ತಿತರರು ಕಥೆಯ ಪಾತ್ರಕ್ಕೆ ಹೊಂದಿಕೊಂಡು ನಟಿಸಿದ್ದಾರೆ.