ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಈ ಕುರಿತು ಸಿಸಿಬಿ ಪೊಲೀಸರು ಬೆಂಗಳೂರಿನ ಎಸಿಎಂಎಂ ಕೋರ್ಟ್‌ಗೆ ಸುಮಾರು 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಬಂಧಿತ ಆರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅವರ ಅಭಿಮಾನಿಗಳಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ವಿಜಯಲಕ್ಷ್ಮಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ, ಅವರ ಫೋಟೋಗಳನ್ನು ಹಂಚಿಕೊಂಡು ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಧಿತ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳನ್ನು ಫಾರೆನ್ಸಿಕ್ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಮೊಬೈಲ್ ಡೇಟಾ ರಿಟ್ರೀವ್ ವರದಿ ಇನ್ನೂ ಬರಬೇಕಿದೆ.
ಇದೇ ವೇಳೆ, ಪ್ರಕರಣದಲ್ಲಿ ಬಳಸಲಾದ ಇನ್ನೂ 12 ನಕಲಿ ಐಡಿಗಳ ಕುರಿತು ಮಾಹಿತಿ ಸಿಗದ ಹಿನ್ನೆಲೆ ಸಂಬಂಧಿತ ಕಂಪನಿಗಳಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ. ಪ್ರಸ್ತುತ ಕೋರ್ಟ್‌ಗೆ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಕರಣದ ಆರೋಪಿಗಳು ಕಳೆದ ಎರಡು ತಿಂಗಳಿನಿಂದ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಇದ್ದು, ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 24ಕ್ಕೆ ಮುಂದೂಡಿದೆ.























