ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಕಳೆದ ಮೂರು ತಿಂಗಳಿನಿಂದ ಕನ್ನಡಿಗರನ್ನು ರಂಜಿಸುತ್ತಿದ್ದ ಈ ಶೋ, ಜನವರಿ 17 ಮತ್ತು 18ರಂದು ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ತೆರೆಬೀಳಲಿದೆ ಎನ್ನಲಾಗುತ್ತಿದೆ.
ಕಲರ್ಸ್‌ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುವುದು ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಕಲರ್ಸ್ ಕನ್ನಡ ವಾಹಿನಿಯು ಸೃಜನ್ ಲೋಕೇಶ್ ಸಾರಥ್ಯದಲ್ಲಿ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಎಂಬ ಹೊಸ ಹಾಸ್ಯದ ಹಬ್ಬವನ್ನು ಹೊತ್ತು ತರುತ್ತಿದೆ.
ಜೂನಿಯರ್ಸ್‌ಗಳ ಕಾಮಿಡಿ ದರ್ಬಾರ್: ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಈಗಾಗಲೇ ತನ್ನ ವಿಭಿನ್ನ ಶೈಲಿಯ ಹಾಸ್ಯ ಹಾಗೂ ವಿಶಿಷ್ಟ ಕಾನ್ಸೆಪ್ಟ್‌ಗಳಿಂದ ಕಿರುತೆರೆಯ ವೀಕ್ಷಕರ ಮನಗೆದ್ದಿದೆ. ಆದರೆ ಈ ಬಾರಿ ಹೊಸ ಥೀಮ್ ಬೆಳಕಿಗೆ ತರಲಿದೆ ಎನ್ನಲಾಗುತ್ತಿದೆ.
ಹಾಗೇ ಪ್ರತಿ ಬಾರಿ ಶೋದಲ್ಲಿ ದೊಡ್ಡವರಿಂದ ಈ ಕಾರ್ಯಕ್ರಮ ನಡೆಯುತಿತ್ತು ಆದರೆ ಈ ಬಾರಿ ‘ಜೂನಿಯರ್ಸ್’ ಆವೃತ್ತಿಯಾಗಿದ್ದು, ಪುಟಾಣಿ ಮಕ್ಕಳ ಅದ್ಭುತ ನಟನೆ ಮತ್ತು ಟೈಮಿಂಗ್ ಸೆನ್ಸ್ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಿದ್ಧತೆ ನಡೆಸಲಾಗಿದೆ.
ಸಣ್ಣ ವಯಸ್ಸಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಮತ್ತು ಅವರಲ್ಲಿರುವ ಹಾಸ್ಯ ಪ್ರಜ್ಞೆಯನ್ನು ಜಗತ್ತಿಗೆ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಮತ್ತೆ ಒಂದಾದ ‘ಟ್ರಿಪಲ್ ರೈಡಿಂಗ್’ ಜಡ್ಜಸ್: ಈ ಶೋನ ಅತಿ ದೊಡ್ಡ ಆಕರ್ಷಣೆ ಎಂದರೇ ತೀರ್ಪುಗಾರರ ಪೀಠ. ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಈ ಶೋನ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಹಿರಿಯ ನಟಿ ಶ್ರುತಿ ಹಾಗೂ ಹಾಸ್ಯ ನಟ ಸಾಧು ಕೋಕಿಲ ಸಹ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಮೂವರ ಕಾಂಬಿನೇಷನ್ ಈಗಾಗಲೇ ‘ಮಜಾ ಟಾಕೀಸ್’ ಮತ್ತು ಹಿಂದಿನ ಸೀಸನ್‌ಗಳಲ್ಲಿ ಜನಪ್ರಿಯವಾಗಿದ್ದು, ಇವರ ಜುಗಲ್‌ಬಂದಿ ನೋಡಲು ವೀಕ್ಷಕರು ಕಾತುರರಾಗಿದ್ದಾರೆ. ಸಾಧು ಕೋಕಿಲ ಮ್ಯಾನರಿಸಂ ಹಾಗೂ ನಟಿ ಶ್ರುತಿ ಸ್ಪರ್ಧಿಗಳಿಗೆ ಹೇಳುವ ಪ್ರೋತ್ಸಾಹದ ಮಾತುಗಳು ಮಕ್ಕಳ ಪ್ರತಿಭೆಗೆ ಮೆರುಗು ನೀಡಲಿವೆ.
ಯಾವಾಗ ಪ್ರಸಾರ?: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದ ಮರು ವಾರದಿಂದಲೇ ಈ ಶೋ ಪ್ರಸಾರ ಕಾಣುವ ಸಾಧ್ಯತೆಯಿದೆ. ಬಿಗ್ ಬಾಸ್‌ನಲ್ಲಿನ ಜಗಳ, ಎಮೋಷನ್ಸ್ ಮತ್ತು ಗಂಭೀರ ವಾತಾವರಣದ ನಂತರ, ವೀಕ್ಷಕರಿಗೆ ಹಗುರವಾದ ಮನರಂಜನೆಯ ಅವಶ್ಯಕತೆಯಿರುತ್ತದೆ.
ಹೀಗಾಗಿ ಆ ಜಾಗವನ್ನು ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಅತ್ಯಂತ ಸಮರ್ಥವಾಗಿ ತುಂಬಲಿದೆ ಎಂಬುದು ವಾಹಿನಿಯ ಭರವಸೆ. ಒಟ್ಟಾರೆಯಾಗಿ, ವೀಕೆಂಡ್‌ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡಲು ಸೃಜನ್ ಮತ್ತು ಟೀಮ್ ಪಕ್ಕಾ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.









