Home Advertisement
Home ಸಿನಿ ಮಿಲ್ಸ್ Movie Review ‘ಸೀಟ್ ಎಡ್ಜ್’: ಯೂಟ್ಯೂಬರ್‌ ಭೂತಲೋಕ

Movie Review ‘ಸೀಟ್ ಎಡ್ಜ್’: ಯೂಟ್ಯೂಬರ್‌ ಭೂತಲೋಕ

0
8

ಚಿತ್ರ: ಸೀಟ್ ಎಡ್ಜ್
ನಿರ್ದೇಶನ: ಚೇತನ್ ಶೆಟ್ಟಿ
ನಿರ್ಮಾಣ: ಗಿರಿಧರ ಟಿ. ವಸಂತಪುರ
ತಾರಾಗಣ: ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮೀ, ಗಿರೀಶ್ ಮತ್ತಿತರರು.
ರೇಟಿಂಗ್: ⭐⭐⭐⭐ (3.5/5)

– ಗಣೇಶ್ ರಾಣೆಬೆನ್ನೂರು

ಇಂದಿನ ಟ್ರೆಂಡಿಂಗ್ ಲೋಕ, ಸೋಶಿಯಲ್ ಮೀಡಿಯಾ ಕ್ರೇಜ್ ಮತ್ತು ಅದರ ಒಳಹೊರಗಿನ ಸತ್ಯಗಳನ್ನು ಕುತೂಹಲಕಾರಿ ಕಥನದ ಮೂಲಕ ತೆರೆದಿಡುವ ಸಿನಿಮಾ ‘ಸೀಟ್ ಎಡ್ಜ್’.

ಐಟಿ ಉದ್ಯೋಗಿ ಸಮಾಜದಲ್ಲಿ ಹೆಸರು ಮಾಡಬೇಕು, ಲೈಫ್‌ಸ್ಟೈಲ್‌ ಬದಲಿಸಬೇಕು ಎಂಬ ಹಂಬಲದೊಂದಿಗೆ ಕೈತುಂಬಾ ಸಂಬಳದ ಕೆಲಸ ಬಿಟ್ಟು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾ ಲೋಕಕ್ಕೆ ಧುಮುಕುವ ಯುವಕನ ಪಯಣವೇ ಚಿತ್ರದ ಕೇಂದ್ರ ಬಿಂದು.

ಇದನ್ನೂ ಓದಿ: ಚಿತ್ರರಂಗದ 3 ದಶಕಗಳ ಸಂಭ್ರಮದಲ್ಲಿ ಸುದೀಪ್ ಭಾವುಕ ಪತ್ರ

ಸಿದ್ದು (ಸಿದ್ದು ಮೂಲಿಮನಿ) ಎಂಬ ಯುವಕ ತನ್ನ ಐಟಿ ಉದ್ಯೋಗವನ್ನು ತ್ಯಜಿಸಿ ವ್ಲಾಗರ್ ಆಗಲು ಮುಂದಾಗುತ್ತಾನೆ. ಈ ಪಯಣದಲ್ಲಿ ಅವನಿಗೆ ಗೆಳೆಯ ರಘು (ರಘು ರಾಮನಕೊಪ್ಪ) ಬೆನ್ನೆಲುಬಾಗಿ ನಿಂತಿರುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆಯುವ ಹಂಬಲದಲ್ಲಿ ಇಬ್ಬರೂ ಮಾಡುವ ವ್ಲಾಗ್‌ಗಳು ಆರಂಭದಲ್ಲಿ ಯಶಸ್ಸು ಕಾಣುತ್ತವೆ. ಆದರೆ ಟ್ರೆಂಡಿಂಗ್ ಕಂಟೆಂಟ್ ಮಾಡುವ ಭರದಲ್ಲಿ ದೆವ್ವದ ಶಿಕಾರಿಯ ವಿಡಿಯೋ ಮಾಡಲು ಹೊರಟಾಗ ಕಥೆ ಅಪಾಯಕಾರಿ ತಿರುವು ಪಡೆದುಕೊಳ್ಳುತ್ತದೆ.

ತಾವು ಮಾಡಿದ ಕಂಟೆಂಟ್‌ನಿಂದಲೇ ಸಮಸ್ಯೆಗೆ ಸಿಲುಕಿ ಠಾಣೆ ಮೆಟ್ಟಿಲು ಏರುವ ಸನ್ನಿವೇಶಗಳು, ಕಂಟೆಂಟ್ ಕ್ರಿಯೇಟರ್ ಆಗಿರುವ ಪೊಲೀಸ್ ಅಧಿಕಾರಿ – ಇವೆಲ್ಲವೂ ಇಂದಿನ ಸಮಾಜದ ವಾಸ್ತವಿಕತೆಯನ್ನು ವಿಡಂಬನಾತ್ಮಕವಾಗಿ ಪ್ರತಿಬಿಂಬಿಸುತ್ತವೆ. ಇದರ ನಡುವೆ ಸಿದ್ದು ಜೀವನಕ್ಕೆ ನಂದಿನಿ (ರವೀಕ್ಷಾ ಶೆಟ್ಟಿ) ಪ್ರವೇಶಿಸುತ್ತಾಳೆ. ಪ್ರೀತಿ, ಸ್ನೇಹ ಮತ್ತು ಕನಸುಗಳ ನಡುವೆ ಕಥೆ ಹೊಸ ದಿಕ್ಕು ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ಚಿತ್ರದ ಮೊದಲಾರ್ಧ ಸ್ನೇಹ, ಹಾಸ್ಯ, ಪ್ರಣಯ ಹಾಗೂ ಯೂಟ್ಯೂಬ್ ಖ್ಯಾತಿಯ ಏರಿಳಿತಗಳನ್ನು ಮನರಂಜನಾತ್ಮಕವಾಗಿ ನಿರೂಪಿಸುತ್ತದೆ. ಉದ್ದೇಶಪೂರ್ವಕವಾಗಿ ಹಾರರ್ ಅಂಶಗಳನ್ನು ನಿಯಂತ್ರಿಸಿಕೊಂಡು, ಪಾತ್ರಗಳ ಭಾವನೆಗಳಿಗೆ ಜಾಗ ಕೊಡುವಲ್ಲಿ ನಿರ್ದೇಶಕ ಚೇತನ್ ಶೆಟ್ಟಿ ಯಶಸ್ವಿಯಾಗಿದ್ದಾರೆ.

ದ್ವಿತೀಯಾರ್ಧದಲ್ಲಿ ಕಥೆ ಸಂಪೂರ್ಣವಾಗಿ ಬದಲಾಗುತ್ತದೆ. ಸಿದ್ದು ಪ್ರೇತ ನಗರಿಗೆ ಕಾಲಿಟ್ಟ ಕ್ಷಣದಿಂದಲೇ ಭಯಾನಕ ತಿರುವುಗಳು ಆರಂಭವಾಗುತ್ತವೆ. ಇಲ್ಲಿಯೇ ಸಿನಿಮಾ ನಿಜಾರ್ಥದಲ್ಲಿ ‘ಸೀಟ್ ಎಡ್ಜ್’ ಅನುಭವ ನೀಡುತ್ತದೆ. ಯುವ ನಿರ್ದೇಶಕ ಚೇತನ್ ಶೆಟ್ಟಿ ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕೂರಿಸುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ: ಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ

ನಟನೆಯ ವಿಚಾರದಲ್ಲಿ ಸಿದ್ದು ಮೂಲಿಮನಿ ತಮ್ಮ ಪಾತ್ರವನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ರವೀಕ್ಷಾ ಶೆಟ್ಟಿ ಸಶಕ್ತ ಅಭಿನಯದಿಂದ ಗಮನ ಸೆಳೆಯುತ್ತಾರೆ. ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಗಿರೀಶ್ ಮತ್ತು ಇತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಒಟ್ಟಾರೆ, ಸೋಶಿಯಲ್ ಮೀಡಿಯಾ ವ್ಯಾಮೋಹ, ಯೂಟ್ಯೂಬ್ ಕ್ರೇಜ್ ಮತ್ತು ಅದರ ದುಷ್ಪರಿಣಾಮಗಳನ್ನು ವಿಭಿನ್ನ ಶೈಲಿಯಲ್ಲಿ ಹೇಳುವ ಪ್ರಯತ್ನವೇ ‘ಸೀಟ್ ಎಡ್ಜ್’. ಹೊಸತನ ಬಯಸುವ ಯುವ ಪ್ರೇಕ್ಷಕರಿಗೆ ಈ ಸಿನಿಮಾ ವಿಭಿನ್ನ ಅನುಭವ ನೀಡುತ್ತದೆ.

Previous articleಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್‌ಗೆ ಪ್ರಮುಖ ಖಾತೆ ಹಂಚಿಕೆ
Next articleಕಾಮಿಡಿ ಕಥನ ಬೇಸರದ ಮನಸಿಗೆ ಅಮೃತ ಸಿಂಚನ