Home Advertisement
Home ಸಿನಿ ಮಿಲ್ಸ್ Movie Review: ʼಅಶೋಕʼನ ವಿದ್ಯೆ ಸಮರಕ್ಕೆ ʼಮುಡಿʼಪು

Movie Review: ʼಅಶೋಕʼನ ವಿದ್ಯೆ ಸಮರಕ್ಕೆ ʼಮುಡಿʼಪು

0
92

ದಬ್ಬಾಳಿಕೆ ವಿರುದ್ಧ ಸಮರ ಸಾರಿದ ನಾಯಕ – ಚಿತ್ರದ ಕುತೂಹಲಕರ ಕಥಾನಕ

ಚಿತ್ರ: ದ ರೈಸ್ ಆಫ್ ಅಶೋಕ
ನಿರ್ದೇಶನ: ವಿನೋದ್ ಧೋಂಡಾಳೆ
ನಿರ್ಮಾಣ: ವರ್ಧನ್ ಹರಿ, ಜೈಷ್ಣವಿ ಹಾಗೂ ಸತೀಶ್ ನೀನಾಸಂ
ತಾರಾಗಣ: ಸತೀಶ್ ನೀನಾಸಂ, ಸಪ್ತಮಿ ಗೌಡ, ಬಿ.ಸುರೇಶ, ಸಂಪತ್ ಮೈತ್ರೇಯ.
ರೇಟಿಂಗ್ಸ್: 3

ಜಿ.ಆರ್.ಬಿ

ಆ ಊರಿನಲ್ಲಿ ಓದಿದವರು ಕಡಿಮೆ. ಮಗನನ್ನು (ಸತೀಶ್ ನೀನಾಸಂ) ಚೆನ್ನಾಗಿ ಓದಿಸಿ ಸರ್ಕಾರಿ ಅಧಿಕಾರಿಯನ್ನಾಗಿ ಮಾಡಬೇಕೆಂಬುದು ತಂದೆಯ (ಬಿ.ಸುರೇಶ) ಮಹಾದಾಸೆ. ಅದಕ್ಕೆ ತಕ್ಕಂತೆ ಮಗನೂ ರೆವಿನ್ಯೂ ಇನ್ಸ್‌ಪೆಕ್ಟರ್ ಎಕ್ಸಾಂ ಬರೆದು ಪಾಸಾಗುತ್ತಾನೆ.

ತನ್ನ ಮಗನೂ ಕ್ಷೌರಿಕನಾಗಿರುವುದು ಇಷ್ಟವಿಲ್ಲದ ತಂದೆ, ಆದರೆ ವಿಧಿಯಾಟಕ್ಕೆ ಸಿಲುಕಿ ಅದೇ ಕಾಯಕಕ್ಕೆ ಮುಂದಾಗುವ ಪುತ್ರ… ಆ ಊರಿನಲ್ಲಿರುವ ‘ಮುಡಿಕಟ್ಟೆ’ಗೆ ಒಬ್ಬನೇ ನಾಯಕ..! ಆತನ ಕೋಟೆಯನ್ನು ಬೇಧಿಸುವುದು ಸುಲಭದ ವಿಷಯವಲ್ಲ. ಅದಾಗ್ಯೂ ಆತನ ಕ್ರಾಂತಿಯ ಕಿಡಿ ಯಾವ ಪರಿ ಹಬ್ಬುತ್ತದೆ ಎಂಬುದು ಚಿತ್ರದ ಒಟ್ಟಾರೆ ಸಾರಾಂಶ.

ಅಷ್ಟಕ್ಕೂ ಈ ಚಿತ್ರದ ಆಶಯ ಬೇರೆಯೇ ಆಗಿದ್ದರೂ, ಒಂದು ಹಂತದ ಬಳಿಕ ಸಿನಿಮಾ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತದೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿರುವ ‘ಇಲ್ಲಿ ಯಾರೂ ಮುಖ್ಯರಲ್ಲ… ಯಾರೂ ಅಮುಖ್ಯರಲ್ಲ’ ಎಂಬ ಸಾಲುಗಳೇ ಕಥೆಯ ಬುನಾದಿ. ಅದನ್ನು ಕೊಂಚ ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲವೆಡೆ ಬದಲಾವಣೆ ಮಾಡಿಕೊಳ್ಳಲಾಗಿದೆ.

ಇದು ೭೦ರ ಕಾಲಘಟ್ಟದ ಕಥನ ಎಂಬುದನ್ನು ಚಿತ್ರತಂಡ ಬಿಂಬಿಸಿದೆ. ಆಗಿನ ಕಾಲದಲ್ಲಿದ್ದ ದಬ್ಬಾಳಿಕೆ, ಅಸ್ಪೃಶ್ಯತೆ, ದೌರ್ಜನ್ಯ… ಇದಕ್ಕೆಲ್ಲ ಪೂರ್ಣವಿರಾಮ ಹಾಕಲು ಹೊರಡುವ ನಾಯಕ. ಅದಕ್ಕೆ ಎದುರಾಗುವ ಅಡೆತಡೆಗಳು, ತನ್ನ ಕುಟುಂಬಕ್ಕೇ ಎರಗುವ ಸಮಸ್ಯೆ… ಹೀಗೆ ಒಂದಷ್ಟು ವಿಷಯಗಳನ್ನು ಹೇಳುತ್ತಾ ತನ್ನ ವಿದ್ಯೆ-ಬುದ್ಧಿಯಿಂದ ಸಮಸ್ಯೆಯನ್ನು ಬಗೆಹರಿಸಬೇಕಿದ್ದ ನಾಯಕ, ಸಮರ ಸಾರುತ್ತಾನೆ.

ಮುಂದೇನು ಎಂಬುದಕ್ಕೆ ನಿಮ್ಮ ಊಹೆಗೆ ಬಿಟ್ಟಿದ್ದು… ಸತೀಶ್ ನೀನಾಸಂ ಕ್ರಾಂತಿಕಾರಿ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಸಪ್ತಮಿ, ಬಿ.ಸುರೇಶ, ಸಂಪತ್ ನಟನೆ ಪಾತ್ರಕ್ಕನುಗುಣವಾಗಿದೆ.