ಚಿತ್ರದುರ್ಗ: ನಟ ದರ್ಶನ್ ಹೆಸರಿನ ಹಿಂದೆ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲೇ ಇವೆ. ಈಗಾಗಲೇ ಹಲವು ವಿಚಾರವಾಗಿ ದರ್ಶನ ಹೆಸರು ಸುದ್ದಿಯಾಗಿತ್ತು. ಸದ್ಯ ದರ್ಶನ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಮಧ್ಯೆ ದರ್ಶನ್ ಅಭಿಮಾನಿಗಳು ಅವರ ಡೆವಿಲ್ ಸಿನಿಮಾ ರಿಲೀಸ್‌ಗೆ ಅದ್ಧೂರಿ ಸಿದ್ಧತೆ ನಡೆಸಿದ್ದಾರೆ.
ಒಂದಡೆ ದಚ್ಚು ಸಿನಿಮಾ ಬಿಡುಗಡೆ ಸಂಭ್ರಮ ಜೋರಾಗಿದ್ದರೆ, ಇನ್ನೊಂದಡೆ ರೇಣುಕಾಸ್ವಾಮಿ ಸಮಾಧಿ ಧ್ವಂಸ ಮಾಡಲಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಹತ್ಯೆ ಆಗಿದ್ದಾನೆ ಎನ್ನಲಾದ ರೇಣುಕಾಸ್ವಾಮಿ ಸಮಾಧಿ ಧ್ವಂಸವಾಗಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಸಮಾಧಿಯ ನಾಮಫಲಕ ಹಾಗೂ ಸಮಾಧಿ ಕಟ್ಟಡವನ್ನು ಕಿತ್ತು ಹಾಕಲಾಗಿದೆ. ರುದ್ರಭೂಮಿ ಬಳಿ ಲೇಔಟ್ ನಿರ್ಮಾಣ ಕಾರ್ಯ ನಡೆಸುತ್ತಿರುವವರು ಸಮಾಧಿ ಧ್ವಂಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚಿತ್ರದುರ್ಗ ನಗರಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಆದರೆ, ಈ ಕುರಿತಂತೆ ನಮಗೆ ಯಾವುದೇ ಮಾಹಿತಿ ಗೊತ್ತಿಲ್ಲವೆಂದು ರೇಣುಕಾಸ್ವಾಮಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.









