ಸಂಪೂರ್ಣ AI ತಂತ್ರಜ್ಞಾನದಲ್ಲಿ ಮೂಡಿದ ವಿಭಿನ್ನ ಪ್ರಯೋಗದ 35 ಹಾಡುಗಳ ಸಿನಿಮಾ “ಐ ಆ್ಯಮ್ ಗಾಡ್ – ದಿ ಕ್ರೇಜಿ”
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹಾಡುಗಳೇ ಪ್ರಮುಖ ಹೈಲೈಟ್ ಆಗಿರುತ್ತವೆ ಎಂಬುದು ಸಿನಿಪ್ರೇಕ್ಷಕರಿಗೆ ಹೊಸ ವಿಷಯವೇನಲ್ಲ. ಈವರೆಗೆ ಅವರು ನೀಡಿದ ಅನೇಕ ಸಿನಿಮಾಗಳಲ್ಲಿ ಸಂಗೀತವೇ ಕಥೆಗೆ ಜೀವ ತುಂಬಿದೆ. ಇದೀಗ ರವಿಚಂದ್ರನ್ ಅವರು 30–35 ಹಾಡುಗಳನ್ನು ಒಳಗೊಂಡ ವಿಶಿಷ್ಟ ಸಿನಿಮಾವೊಂದರೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ವಿಚಾರವನ್ನು ನಿನ್ನೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ಫಿನಾಲೆ ವೇದಿಕೆಯಲ್ಲಿ ಅವರು ಬಹಿರಂಗಪಡಿಸಿದ್ದು, ಈ ಸುದ್ದಿ ಕೇಳಿ ಹಲವರಿಗೆ ಅಚ್ಚರಿ ಮೂಡಿದೆ.
ಇದನ್ನೂ ಓದಿ: Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ
“ಐ ಆ್ಯಮ್ ಗಾಡ್ – ದಿ ಕ್ರೇಜಿ” (I Am God – The Crazy) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಚಿತ್ರ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗುತ್ತಿದೆ ಎಂಬುದು ವಿಶೇಷ. ಬಿಗ್ ಬಾಸ್ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದ ರವಿಚಂದ್ರನ್ ಅವರು ಸ್ಪರ್ಧಿಯೊಬ್ಬರನ್ನು ಎಲಿಮಿನೇಟ್ ಮಾಡುವ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: PMFBY ಯೋಜನೆ ಅನುಷ್ಠಾನ: ಕರ್ನಾಟಕಕ್ಕೆ ದೇಶದ ಎರಡನೇ ಸ್ಥಾನ
ಈ ಬಗ್ಗೆ ಮಾತನಾಡಿದ ಅವರು, “ಎರಡೂವರೆ ವರ್ಷಗಳಿಂದ ಒಂದು ಸಿನಿಮಾ ಮಾಡ್ತಾ ಇದ್ದೀನಿ. ಸುಮಾರು 400 ದಿನಗಳ ಕಾಲ ಶೂಟಿಂಗ್ ಮಾಡಿದ್ದೇನೆ. ಈ ಸಿನಿಮಾನ ಒಬ್ಬನೇ ಮಾಡಿದ್ದೇನೆ. ಕ್ಯಾಮೆರಾಮೆನ್ ಬಿಟ್ಟರೆ ಉಳಿದೆಲ್ಲ ಕೆಲಸ ನಾನೇ ಮಾಡಿದ್ದೇನೆ. ಎಐ ತಂತ್ರಜ್ಞಾನ ಇದೆ. ಚಿತ್ರದ ಹೆಸರು ‘ಐ ಆ್ಯಮ್ ಗಾಡ್ – ದಿ ಕ್ರೇಜಿ’. ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಕೂಡ ನಾನೆ ಎಂದಿರುವ ರವಿಚಂದ್ರನ್, ಈ ಸಿನಿಮಾದಲ್ಲಿ ಸುಮಾರು 30–35 ಹಾಡುಗಳು ಇರುತ್ತವೆ. ನನ್ನ ಹುಟ್ಟುಹಬ್ಬದ ದಿನವಾದ ಮೇ 30ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಉದ್ದೇಶವಿದೆ. ನಾನೇ ಎಲ್ಲವನ್ನೂ ಮಾಡುತ್ತಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ
ಸಂಗೀತ ನಿರ್ದೇಶಕರಿಲ್ಲದೇ, ಸ್ವತಃ ರವಿಚಂದ್ರನ್ ಅವರೇ ಹಾಡುಗಳ ರಚನೆ, ಸಂಗೀತ ಸಂಯೋಜನೆ ಸೇರಿದಂತೆ ಬಹುತೇಕ ಎಲ್ಲಾ ಸೃಜನಾತ್ಮಕ ಜವಾಬ್ದಾರಿಗಳನ್ನು ಹೊತ್ತಿರುವುದು ಈ ಚಿತ್ರದ ವಿಶೇಷತೆ. ಕನ್ನಡ ಚಿತ್ರರಂಗದಲ್ಲಿ AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ನಿರ್ಮಾಣವಾಗುತ್ತಿರುವ ಅಪರೂಪದ ಪ್ರಯೋಗಾತ್ಮಕ ಚಿತ್ರಗಳಲ್ಲಿ “ಐ ಆ್ಯಮ್ ಗಾಡ್ – ದಿ ಕ್ರೇಜಿ” ಒಂದಾಗಿದ್ದು, ಈ ಸಿನಿಮಾ ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.























