SK Home Ad
Home ಸಿನಿ ಮಿಲ್ಸ್ ಜಾಗತಿಕ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದ ‘Obsession’; ಭಾರತದಲ್ಲೂ ₹43 ಕೋಟಿ ಬಾಚಿಕೊಂಡ ಹಾರರ್ ಮೂವಿ

ಜಾಗತಿಕ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದ ‘Obsession’; ಭಾರತದಲ್ಲೂ ₹43 ಕೋಟಿ ಬಾಚಿಕೊಂಡ ಹಾರರ್ ಮೂವಿ

0
30

ಚಿತ್ರರಂಗದಲ್ಲಿ ದೊಡ್ಡ ಬಜೆಟ್, ಸ್ಟಾರ್ ನಟರಿದ್ದರಷ್ಟೇ ಸಿನಿಮಾ ಗೆಲ್ಲುತ್ತದೆ ಎಂಬ ಕಾಲ ಬದಲಾಗಿದೆ. ಕೇವಲ ಕಥೆ ಮತ್ತು ವಿಭಿನ್ನ ಮೇಕಿಂಗ್‌ನಿಂದಲೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬುದನ್ನು ಹಾಲಿವುಡ್‌ನ ‘Obsession’ ಸಿನಿಮಾ ಸಾಬೀತುಪಡಿಸಿದೆ. ಕೇವಲ 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದು, ವಿಶ್ವಾದ್ಯಂತ ಬರೋಬ್ಬರಿ 1,800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಚಿತ್ರದ ಕಥಾಹಂದರ ತೀರಾ ವಿಭಿನ್ನವಾಗಿದೆ. ಒಬ್ಬ ಯುವಕ ತಾನು ಪ್ರೀತಿಸುವ ಹುಡುಗಿ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದು ಆಸೆ ಪಡುತ್ತಾನೆ. ಇದಕ್ಕಾಗಿ ಒಂದು ನಿಗೂಢ ಮರದ ಹತ್ತಿರ ಹೋಗಿ ಬೇಡಿಕೊಳ್ಳುತ್ತಾನೆ (ವಿಶ್ ಮಾಡುತ್ತಾನೆ). ಆದ್ರೆ ಆತನ ಆಸೆ ಈಡೇರಿದ ಮೇಲೆ, ಆ ಹುಡುಗಿಯ ಪ್ರೀತಿ ಮಿತಿ ಮೀರಿ ‘ಸೈಕೋ ವ್ಯಾಮೋಹ’ವಾಗಿ (Obsession) ಬದಲಾಗುತ್ತದೆ. ತದನಂತರ ಆ ಯುವಕ ಎದುರಿಸುವ ಕಂಟಕಗಳು ಮತ್ತು ಸಸ್ಪೆನ್ಸ್ ತಿರುವುಗಳೇ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಪ್ರಸಿದ್ಧ ಯೂಟ್ಯೂಬ್ ಕ್ರಿಯೇಟರ್ ಕರಿ ಬಾರ್ಕರ್ ನಿರ್ದೇಶನದ ಈ ಸಿನಿಮಾ ಇಡೀ ವಿಶ್ವದಾದ್ಯಂತ ಬರೋಬ್ಬರಿ $224.7 ಮಿಲಿಯನ್ (ಸುಮಾರು ₹1,800 ಕೋಟಿಗೂ ಅಧಿಕ) ಗಳಿಕೆ ಮಾಡಿದೆ. ಈ ಮೂಲಕ ಈ ವರ್ಷದ ‘ಹೈಯೆಸ್ಟ್ ಗ್ರಾಸಿಂಗ್ ಹಾರರ್ ಮೂವಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಭಾರತದಲ್ಲೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬರೋಬ್ಬರಿ ₹43 ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ.
ಯಾವುದೇ ಸಾಂಪ್ರದಾಯಿಕ ದೆವ್ವ-ಭೂತಗಳ ಅಬ್ಬರವಿಲ್ಲದೆ, ಕೇವಲ ಸೈಕಾಲಜಿಕಲ್ ಮೇಕಿಂಗ್ ಮತ್ತು ಹಿನ್ನೆಲೆ ಸಂಗೀತದಿಂದಲೇ ಪ್ರೇಕ್ಷಕರಿಗೆ ಬೆವರಿಳಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಥ್ರಿಲ್ಲರ್ ಸಿನಿಮಾ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ.