ಬಹುತೇಕ ಕುಟುಂಬಗಳು ಪ್ರೀತಿಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗಂತ ಪ್ರೇಮಿಗಳು ಪ್ರೀತಿಸೋದನ್ನು ಬಿಡೋದಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕುಟುಂಬದವರ ನಿರ್ಧಾರ ಏನಾಗಿರುತ್ತದೆ..? ಪ್ರೇಮಿಗಳ ನಿಲುವು ಯಾವ ರೀತಿಯಲ್ಲಿರುತ್ತದೆ ಎಂಬುದಕ್ಕೆ ಆಸ್ಟಿನ್ ಮಹಾಮೌನ ಸಿನಿಮಾದಲ್ಲಿ ಉತ್ತರ ಸಿಗುತ್ತದೆ.
ಮಕ್ಕಳ ಆಸೆ, ಪ್ರೀತಿ, ಆಸಕ್ತಿಯ ವಿರುದ್ಧವಾಗಿ ಹಿರಿಯರು ವಿರೋಧ ವ್ಯಕ್ತಪಡಿಸಿದಾಗ, ಪೋಷಕರ ಜಿದ್ದು ಮಕ್ಕಳನ್ನು ಯಾವ ರೀತಿ ಬಲಿಪಶುಗಳನ್ನಾಗಿ ಮಾಡುತ್ತದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ ನಿರ್ದೇಶಕ ವಿನಯ್. ನಟನೆ, ನಿರ್ಮಾಣವು ಅವರೇ ನಿರ್ವಹಿಸಿದ್ದಾರೆ.
ಜಾಸ್ಮಿನ್ ಹಾಗೂ ಆಸ್ಟಿನ್ ನಡುವಿನ ಪ್ರೇಮಕಥನ ಕರಾವಳಿಯ ಭಾಗದಲ್ಲಿ ಜರುಗುತ್ತದೆ. 90ರ ಕಾಲಘಟ್ಟದಲ್ಲಿ ನಡೆಯುವ ಅಪರೂಪದ ಲವ್ ಸ್ಟೋರಿಯನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿನಯ್. ಬರೀ ಪ್ರೀತಿಯನ್ನು ಮಾತ್ರ ತೋರಿಸಿದೆ, ಕುಟುಂಬದ ಮೌಲ್ಯ, ಬಂಧ, ಭಾವನೆಗಳನ್ನು ಕಟ್ಟಿ ಕೊಟ್ಟಿರುವ ರೀತಿ ಗಮನ ಸೆಳೆಯುತ್ತದೆ.
ಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು. ಈ ಚಿತ್ರದಲ್ಲಿ ಎರಡು ಕುಟುಂಬಗಳ ಕಥೆ ಅಡಕವಾಗಿದೆ. ಡಿಸೋಜಾ ಹಾಗೂ ಜಾರ್ಜ್ ಕುಟುಂಬಗಳ ಸುತ್ತ ಸಾಗುವ ಈ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಸಮುದಾಯದ ಕಥಾನಕವನ್ನು ಒಳಗೊಂಡಿದೆ. ನಿರ್ದೇಶಕರು ಸಿನಿಮಾವನ್ನು ಕುತೂಹಲದ ಘಟ್ಟಕ್ಕೆ ತಂದು, ಆ ಕುತೂಹಲವನ್ನು ಮುಂದಿನ ಭಾಗದಲ್ಲಿ ಮುಂದುವರಿಸುವ ಕುರುಹು ನೀಡಿದ್ದಾರೆ. ಸಂಗೀತ ಹಾಗೂ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ನಾಯಕ ಕಂ ನಿರ್ದೇಶಕ ವಿನಯ್ ಭರವಸೆ ಮೂಡಿಸಿದ್ದಾರೆ. ನಾಯಕಿ ರಿಷಾ ಜಾಸ್ಮಿನ್ ಆಗಿ ಪಾತ್ರಕ್ಕೆ ಹೊಂದಿಕೊಂಡರೆ, ಮತ್ತೊಬ್ಬ ನಟಿ ಡಾಕ್ಟರ್ ಪಾತ್ರದಲ್ಲಿ ಕಥೆಗೆ ತಿರುವು ನೀಡುತ್ತಾರೆ. ಬಲರಾಜವಾಡಿ, ರಘು ರಾಮನಕೊಪ್ಪ, ಜಗ್ಗಪ್ಪ, ಸ್ವಾತಿ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.