ಡಿಸೆಂಬರ್ 25ಕ್ಕೆ ತೆರೆಕಾಣಲಿರುವ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ
ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಾಗಿ ಅಭಿನಯಿಸಿರುವ ಹಾಗೂ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಮಾರ್ಕ್’ ಇದೇ ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗಲೇ ಚಿತ್ರತಂಡ ಅಭಿಮಾನಿಗಳಿಗಾಗಿ ಭರ್ಜರಿ ಪ್ರೀ–ರಿಲೀಸ್ ಈವೆಂಟ್ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಆಯ್ಕೆಯಾಗಿರುವುದು ವಿಶೇಷ.
‘ಮಾರ್ಕ್’ ಸಿನಿಮಾದ ಪ್ರೀ–ರಿಲೀಸ್ ಕಾರ್ಯಕ್ರಮ ಡಿಸೆಂಬರ್ 20ರಂದು ಸಂಜೆ 6 ಗಂಟೆಯಿಂದ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಸುದ್ದಿಯಿಂದ ಸುದೀಪ್ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ದೊಡ್ಡ ಮಟ್ಟದ ಸಿನಿಮಾ ಕಾರ್ಯಕ್ರಮ ನಡೆಯುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್
ಸಿದ್ದರಾಗಿ ಹುಬ್ಬಳ್ಳಿಯ ಬಾದ್‌ಶಾ ಅಭಿಮಾನಿಗಳೇ!: ಮಾರ್ಕ್ ಚಿತ್ರದ ಭರ್ಜರಿ ಪ್ರೀ–ರಿಲೀಸ್ ಈವೆಂಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಘೋಷಣೆ ಮಾಡಿರುವ ಚಿತ್ರದ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ “ಊರಿಗೆ ಗೊತ್ತು… ಮಾರ್ಕ್ ಗತ್ತು. ಸಿದ್ದರಾಗಿ ಹುಬ್ಬಳ್ಳಿಯ ಬಾದ್‌ಶಾ ಅಭಿಮಾನಿಗಳೇ! ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಡಿಸೆಂಬರ್ 20ರಂದು ನೆಹರು ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಮಾರ್ಕ್ ಪ್ರೀ–ರಿಲೀಸ್ ಈವೆಂಟ್ ನಡೆಯಲಿದೆ” ಎಂದು ಘೋಷಿಸಿದೆ.
ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್ ಅವರ ಆಕ್ರಮಣಕಾರಿ ಲುಕ್ ಮತ್ತು ಆಕ್ಷನ್ ಭಂಗಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: AI ದುರುಪಯೋಗಕ್ಕೆ ಇತಿ ‘ಶ್ರೀ’ ಹಾಡಲು ನಟಿ ಲೀಲಾ ಕರೆ
ಬಲಿಷ್ಠ ನಿರ್ಮಾಣ ಹಾಗೂ ತಾಂತ್ರಿಕ ತಂಡ: ‘ಮಾರ್ಕ್’ ಸಿನಿಮಾವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳಡಿ ನಿರ್ಮಿಸಲಾಗಿದೆ. ಇದೇ ನಿರ್ಮಾಣ ತಂಡದಿಂದ ಬಿಡುಗಡೆಯಾದ ‘ಮ್ಯಾಕ್ಸ್’ ಸಿನಿಮಾ 2024ರ ಡಿಸೆಂಬರ್ 25ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿತ್ತು.
ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದು, ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಯೋಗಿಬಾಬು, ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ
ಸುದೀಪ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ: ಹುಬ್ಬಳ್ಳಿಯಲ್ಲಿ ನಡೆಯಲಿರುವ ಈ ಪ್ರೀ–ರಿಲೀಸ್ ಈವೆಂಟ್‌ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದ ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಟೀಸರ್, ಪೋಸ್ಟರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ‘ಮಾರ್ಕ್’ ಸಿನಿಮಾ, ಪ್ರೀ–ರಿಲೀಸ್ ಈವೆಂಟ್ ನಂತರ ಇನ್ನಷ್ಟು ಭಾರೀ ಹೈಪ್ ಪಡೆದುಕೊಳ್ಳುವ ಸಾಧ್ಯತೆ ಇದೆ.























