ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಕೊನೆಗೂ ತೆರೆಬಿದ್ದಿದೆ. ಈ ದಂಪತಿಗೆ ವಿಚ್ಛೇದನ ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು, ಪತ್ನಿಯ ಜೀವನಾಂಶಕ್ಕಾಗಿ 2 ಕೋಟಿ ರೂಪಾಯಿ ಪಾವತಿಸುವಂತೆ ವಿಜಯ್ ಅವರಿಗೆ ಮಹತ್ವದ ಆದೇಶ ನೀಡಿದೆ.
ಹಾಗೇ ವಿಜಯ್‌ಗೆ ಹೈಕೋರ್ಟ್ ಮತ್ತೂಂದು ಷರತ್ತುನೀಡಿದೆ. ಪತ್ನಿಗೆ ಜೀವನಾಂಶದ ಜೊತೆಗೆ ಮೂವರು ಮಕ್ಕಳನ್ನ ನಟ ದುನಿಯಾ ವಿಜಯ್ ಸಂಪೂರ್ಣ ಕರ್ಚು, ವೆಚ್ಚವನ್ನೇಲ್ಲ ನೋಡಿಕೊಳ್ಳುವಂತೆ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಪೀಠವು ಈ ತೀರ್ಪು ಪ್ರಕಟಿಸಿದೆ. 1999ರಲ್ಲಿ ವಿವಾಹವಾಗಿದ್ದ ಈ ಜೋಡಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಸುಖ ಸಂಸಾರ ನಡೆಸಿತ್ತು. ಆದರೆ, ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2013ರಲ್ಲಿ ದುನಿಯಾ ವಿಜಯ್ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂದಿನಿಂದ ಇಂದಿನವರೆಗೆ ನಡೆದ ಹಲವು ಸುತ್ತಿನ ವಾದ-ಪ್ರತಿವಾದಗಳ ನಂತರ, ಈಗ ದಾಂಪತ್ಯಕ್ಕೆ ಅಧಿಕೃತವಾಗಿ ಬ್ರೇಕ್ ಬಿದ್ದಿದೆ.
ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ನಾಗರತ್ನ ಹಾಗೂ ಅವರ ಮೂವರು ಮಕ್ಕಳ ಭವಿಷ್ಯ ಮತ್ತು ಜೀವನ ನಿರ್ವಹಣೆಯನ್ನು ಪ್ರಮುಖವಾಗಿ ಪರಿಗಣಿಸಿದೆ. ವಿಜಯ್ ಅವರ ಚಲನಚಿತ್ರ ರಂಗದ ಸಾಧನೆ, ಸಾಮಾಜಿಕ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು 2 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಜೀವನಾಂಶವನ್ನು ನಿಗದಿಪಡಿಸಲಾಗಿದೆ. ಸದ್ಯ ವಿಜಯ್ ಅವರು ಕೀರ್ತಿ ಅವರೊಂದಿಗೆ ವಾಸವಿದ್ದು, ಈ ತೀರ್ಪಿನ ಮೂಲಕ ಅವರ ಜೀವನದ ಒಂದು ಸುದೀರ್ಘ ವಿವಾದಾತ್ಮಕ ಅಧ್ಯಾಯ ಅಂತ್ಯಗೊಂಡಂತಾಗಿದೆ.






















