ಥಿಯೇಟರ್ ಜೊತೆಗೆ ಒಟಿಟಿಯಲ್ಲೂ ಏಕಕಾಲಕ್ಕೆ ಸಿನಿಮಾ ರಿಲೀಸ್ – ಹೊಸ ಪ್ರಯೋಗಕ್ಕೆ ಮುಂದಾದ ಚಿತ್ರತಂಡ
ಬೆಂಗಳೂರು: ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆ, ಗ್ರಾಮೀಣ ಬದುಕಿನ ಸೊಗಡು ಮತ್ತು ಹಾಸ್ಯ ಮಿಶ್ರಿತ ಕಥಾವಸ್ತುವನ್ನು ಒಳಗೊಂಡ ಹೊಸ ಕನ್ನಡ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ (Howdu Huliya) ಬಿಡುಗಡೆಗೆ ಸಜ್ಜಾಗಿದೆ. ‘ಸ್ವಯಂ ಪ್ರಭಾ ಎಂಟರ್ಟೈನ್ಮೆಂಟ್ ಆ್ಯಂಡ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರವು ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದ ವಿಶೇಷತೆ ಎಂದರೆ, ಚಿತ್ರತಂಡ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಏಕಕಾಲದಲ್ಲಿ ಚಿತ್ರಮಂದಿರಗಳ ಜೊತೆಗೆ ‘ಟಾಕೀಸ್’ (Talkies) ಒಟಿಟಿ ವೇದಿಕೆಯಲ್ಲಿ ಕೂಡ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಇದು ಕನ್ನಡ ಚಿತ್ರರಂಗದಲ್ಲಿ ಅಪರೂಪದ ಪ್ರಯತ್ನವೆನ್ನಲಾಗುತ್ತಿದೆ.
ಇದನ್ನೂ ಓದಿ: ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕೆ ಪದಾರ್ಪಣೆ
‘ಹೌದ್ದೋ ಹುಲಿಯ’ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ನಟ ವೈಜನಾಥ್ ಬಿರಾದರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕೆ. ರತ್ನಾಕರ ಕಾಮತ್ ಹಾಗೂ ಗಣೇಶ್ ಆರ್. ಕಾಮತ್ ಅವರು ನಿರ್ಮಾಣ ಮಾಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜಿ.ಜಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ದಸ್ಕತ್’ ಸಿನಿಮಾ ಮೂಲಕ ಗಮನ ಸೆಳೆದ ಯುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಗ್ರಾಮೀಣ ಬದುಕು, ಹಾಸ್ಯ ಮತ್ತು ಎಮೋಷನ್ ಮಿಶ್ರಿತ ಕಥೆ: ಸಿನಿಮಾ ಕುರಿತು ಚಿತ್ರತಂಡ ಮಾತನಾಡಿ, “ಇದು ಸಂಪೂರ್ಣ ಗ್ರಾಮೀಣ ಬದುಕಿನ ಸೊಗಡನ್ನು ಹೊಂದಿರುವ ಕಥೆ. ಹಾಸ್ಯ, ಎಮೋಷನ್ ಮತ್ತು ಸಮಾಜದ ನೈಜ ಮುಖವನ್ನು ಒಳಗೊಂಡ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಪೂರ್ತಿ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಸಿನಿಮಾ ಮೂಡಿಬಂದಿದ್ದು, ಯುವ ಹಾಗೂ ಅನುಭವಿ ಕಲಾವಿದರ ಸಂಯೋಜನೆಯಿದೆ” ಎಂದು ತಿಳಿಸಿದೆ.
ಇದನ್ನೂ ಓದಿ: “ಲ್ಯಾಂಡ್ ಲಾರ್ಡ್” ದರ್ಶನಕ್ಕೆ ಸಿದ್ದರಾಮಯ್ಯ ಸಿದ್ದ
ವೈಜನಾಥ್ ಬಿರಾದರ್ ಅವರೊಂದಿಗೆ ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಮಲ್ಯ ಬಾಗಲಕೋಟೆ, ಸೂರಜ್, ಸಂತೋಷ್ ರೋಣ, ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ, ಸದಾನಂದ, ಉಮೇಶ್ ಕಿನ್ನಾಳ್, ದಾನಪ್ಪ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ತಾಂತ್ರಿಕ ತಂಡ: ‘ಹೌದ್ದೋ ಹುಲಿಯ’ ಸಿನಿಮಾಗೆ ಸಂತೋಷ್ ಗುಂಪಲಾಜೆ ಹಾಗೂ ದೀಕ್ಷಿತ್ ಧರ್ಮಸ್ಥಳ ಅವರು ಛಾಯಗ್ರಹಣ ಮಾಡಿದ್ದು, ಕಿಶೋರ್ ಶೆಟ್ಟಿ ಮತ್ತು ಸಮರ್ಥನ್ ರಾವ್ ಸಂಗೀತ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಡಿ. ಗೌಡ, ಕ್ರಿಯೇಟಿವ್ ಹೆಡ್ ಆಗಿ ಸ್ಮಿತೇಶ್ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಚಿದಾನಂದ ಪೈ, ನಿಶಿತ್ ಶೆಟ್ಟಿ, ಮನೋಜ್ ಆನಂದ್, ನೀರಜ್ ಕುಂಜರ್ಪ ಹಾಗೂ ಅನೂಪ್ ಭಟ್ ತಂಡದ ಭಾಗವಾಗಿದ್ದಾರೆ.
ಇದನ್ನೂ ಓದಿ: Movie Review: ಹೊಸ ಯುಗದ ಪ್ರೇಮ್ ಕಹಾನಿ
ಉತ್ತರ ಕರ್ನಾಟಕ ಭಾಷೆಯ ಸೊಗಡು, ಹಾಸ್ಯಭರಿತ ಕಥೆ ಮತ್ತು ಹೊಸ ರೀತಿಯ ಬಿಡುಗಡೆ ಮಾದರಿಯೊಂದಿಗೆ ‘ಹೌದ್ದೋ ಹುಲಿಯ’ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.























