ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿ ಮತ್ತೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು 64ನೇ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 9ಕ್ಕೆ ತೀರ್ಪು ಕಾಯ್ದಿರಿಸಿದೆ.
ದರ್ಶನ್ ಮತ್ತು ಇತರೆ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಕುರಿತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ ದರ್ಶನ್‌ಗೆ ಅಗತ್ಯ ವಸ್ತುಗಳನ್ನ ನೀಡುವಂತೆ ಜೈಲಾಧಿಕಾರಿಗೆ ನಿರ್ದೇಶಿಸುವಂತೆ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಅರ್ಜಿಗಳ ಆದೇಶ ಸೆ. 9ರಂದು ಕಾಯ್ದಿರಿಸಿದೆ.
ದರ್ಶನ್‌ಗೆ ಎರಡು ದಿಂಬು, ಎರಡು ಬೆಡ್‌ಶೀಟ್ ಹಾಗೂ ಹೆಚ್ಚುವರಿ ಬಟ್ಟೆ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿದ್ದು ಪ್ಲೇಟು, ಸ್ಪೂನ್, ಬಟ್ಟೆ, ಚಪ್ಪಲಿ ಸೇರಿ ಅಗತ್ಯ ವಸ್ತುಗಳನ್ನ ಪಡೆಯಲು ಅವಕಾಶವಿದೆ. ಸ್ವಂತ ಖರ್ಚಿನಲ್ಲಿ ಖರೀದಿ ಮಾಡಬಹುದಾಗಿದೆ. ವಿಚಾರಣಾಧೀನ ಕೈದಿ ಮಾತ್ರವಲ್ಲ ಶಿಕ್ಷಿತ ಅಪರಾಧಿ ಕೂಡಾ ಇವುಗಳನ್ನು ಪಡೆಯಬಹುದು ಎಂದಿದ್ದಾರೆ.
ಎರಡೂ ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಾಲಯ ಆದೇಶ ಕಾಯ್ದಿರಿಸಿದ್ದು, ಅಂತಿಮವಾಗಿ ದರ್ಶನ್‌ಗೆ ಪರಪ್ಪನ ಅಗ್ರಹಾರಾನಾ? ಅಥವಾ ಬಳ್ಳಾರಿ ಜೈಲಾ? ಎನ್ನುವುದು ಸೇರಿದಂತೆ ದಿಂಬು, ಬೆಡ್‌ಶೀಟ್ ನೀಡಬೇಕಾ ಬೇಡ್ವಾ ಎನ್ನುವ ತೀರ್ಪು ಸೆಪ್ಟೆಂಬರ್ 9ರಂದು ಹೊರಬೀಳಲಿದೆ.
ಮರಣದಂಡನೆ ನೀಡಿ: ದರ್ಶನ್ ಅರ್ಜಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ನುಗ್ಗಿದ ಅನಾಮಿಕ ವ್ಯಕ್ತಿಯೊಬ್ಬ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಿಗೆ ಬೇಲ್ ಕೊಡಬಾರದು. ಮರಣದಂಡನೆ ನೀಡಿ ಎಂದು ಮನವಿ ಮಾಡಿದ್ದಾನೆ. ಈ ವೇಳೆ ನ್ಯಾಯಾಧೀಶಕರು ಯಾರು ನೀವು? ಎಂದು ಪ್ರಶ್ನೆ ಮಾಡಿದ್ದು, ನಾನು ರವಿ ಬೆಳಗೆರೆ ಕಡೆಯವರು ಎಂದು ಉತ್ತರಿಸಿದ್ದಾನೆ. ಬಳಿಕ ನ್ಯಾಯಾಧೀಶರು ʻನಿಮ್ಮ ಅರ್ಜಿ, ಮನವಿ ಏನೇ ಇದ್ದರೂ ಸರ್ಕಾರದ ಮುಖಾಂತರ ಬನ್ನಿ’ ಎಂದು ಸೂಚಿಸಿದ್ದಾರೆ. ಬಳಿಕ ಅನಾಮಿಕ ಕೋರ್ಟ್‌ನಿಂದ ಹೊರ ಹೋಗಿದ್ದಾನೆ ಎನ್ನಲಾಗಿದೆ.