ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ಪ್ರಕಾಶ್ ವೀರ್ ನಿರ್ದೇಶನದ ದಿ ಡೆವಿಲ್ ಸಿನಿಮಾ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭಗೊಳ್ಳಲಿದ್ದು, ಈಗಾಗಲೇ ಲಕ್ಷಾಂತರ ಟಿಕೆಟ್ಸ್ ಅಡ್ವಾನ್ಸ್ ಬುಕ್ಕಿಂಗ್ ಮೂಲಕ ಬಿಕರಿಯಾಗಿವೆ. ಸಾಕಷ್ಟು ಸೆಲೆಬ್ರಿಟಿಗಳು ಸೇರಿದಂತೆ ದರ್ಶನ್ ಅಭಿಮಾನಿಗಳು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ರಾಜ್ಯದ ಅನೇಕ ಕಡೆಗಳಲ್ಲಿ ಈಗಾಗಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗಲು ಸಜ್ಜಾಗುತ್ತಿದ್ದಂತೆ ಸಂಭ್ರಮಾಚರಣೆಯನ್ನು ಶುರುಮಾಡಿಕೊಂಡಿದ್ದಾರೆ.
ಅನ್ನಸಂತರ್ಪಣೆ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಗುರುವಾರ ರಾತ್ರಿ ಅಭಿಮಾನಿಗಳೆಲ್ಲ ಸೇರಿ ಗ್ರಾಮದಲ್ಲಿ ಅನ್ನ ಸಂತರ್ಪಣೆ ಮಾಡಿದ್ದಾರೆ. ಅಲ್ಲದೇ ದರ್ಶನ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು.
ಬೆಳಗ್ಗೆಯಿಂದಲೇ ಆರಂಭವಾಗುವ ಸಿನಿಮಾ ಶೋ ನೋಡಲು ಅಭಿಮಾನಿಗಳು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ತಮ್ಮ ಗೆಳೆಯರ ಬಳಗ ಕೂಡಿಕೊಂಡು ಚಿತ್ರಮಂದಿರಕ್ಕೆ ತೆರಳಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ನಡುವೆ ಅಭಿಮಾನಿಗಳಿಗೆ ದರ್ಶನ್ ಪತ್ರ ಬರೆದಿದ್ದು, ಅದನ್ನು ಅವರ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತ್ರದಲ್ಲೇನಿದೆ?: “ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ನಿಮ್ಮ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ನಿಮಗೆಲ್ಲ ಉತ್ಸಾಹವನ್ನು ನೀಡಿದೆ ನಾನು ದೂರದಲ್ಲಿದ್ದರೂ ಪ್ರತಿಕ್ಷಣ ಅನುಭವಿಸುತ್ತಿದ್ದೇನೆ…” ಎಂದಿದ್ದಾರೆ.
ಯಾರು ಏನೇ ಹೇಳಿದರೂ, ಯಾವುದೇ ವದಂತಿ, ಯಾವುದೇ ನೆಗೆಟಿವಿಟಿ ನಿಮ್ಮ ಮನಸ್ಸನ್ನು ಅಲುಗಾಡಿಸಲು ಬಿಡಬೇಡಿ. ಈ ಕಾಲದಲ್ಲಿ ನನ್ನ ದೊಡ್ಡ ಬಲ ನೀವು.ಡೆವಿಲ್’ ಕಡೆಗೆ ಗಮನ ಹರಿಸಿ. ನನ್ನ ಅನುಪಸ್ಥಿತಿಯಲ್ಲಿಯೂ ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ ಚಿತ್ರ ಯಶಸ್ಸಿನ ಮೂಲಕ ಉತ್ತರಿಸಬೇಕು’ ಎಂದಿರುವ ಅವರು, ನನ್ನ ಮೇಲೆ ನೀವು ತೋರಿದ ಪ್ರೀತಿಯನ್ನುಡೆವಿಲ್’ಗೂ ತೋರಿಸಿ. ಚಿತ್ರದ ಅದ್ಭುತ ಯಶಸ್ಸಿನ ಮೂಲಕ ಉತ್ತರಿಸಬೇಕು. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನಿಮ್ಮನ್ನೆಲ್ಲ ಭೇಟಿಯಾಗುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ಕಾಲವೇ ಸತ್ಯ ಹೇಳುತ್ತದೆ’ ಎಂದಿದ್ದಾರೆ.









