ಚಿತ್ರ: ಬ್ರ್ಯಾಟ್
ನಿರ್ದೇಶನ: ಶಶಾಂಕ್
ನಿರ್ಮಾಣ: ಮಂಜುನಾಥ್ ಕುಂದಕೂರ
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಷಾ, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಮಾನಸಿ ಸುಧೀರ್ ಹಾಗೂ ಡ್ರ್ಯಾಗನ್ ಮಂಜು ಮುಂತಾದವರು.
ರೇಟಿಂಗ್ಸ್: 3.5
- ಗಣೇಶ್ ರಾಣೆಬೆನ್ನೂರು
ಒಂದು ಸಿಕ್ಸರ್‌ಗೆ ಇಂತಿಷ್ಟು ರೇಟು… ಆಯಾ ಓವರ್‌ನಲ್ಲಿ ಇಂಥವರೇ ಔಟಾಗುತ್ತಾರೆ ಎಂಬುದಕ್ಕೆ ಮತ್ತಷ್ಟು ರೇಟು..! ಅಲ್ಲೆಲ್ಲೋ ಆಟಗಾರರು ಆಡುವ ಕ್ರಿಕೆಟ್‌ಗೆ ಇಲ್ಲಿ ಕುಳಿತು ಅವರ ಆಟದ ಮೇಲೆ ಬೆಟ್ ಕಟ್ಟುತ್ತಾ ದುಡ್ಡು ಮಾಡುವುದು ಒಂದೆಡೆ… ಆದರೆ ಈ ಜೂಜು ಎಂಥವರನ್ನೂ ಅಪಾಯಕ್ಕೆ ದೂಡಬಲ್ಲದು ಎಂಬ ಅರಿವಿಲ್ಲದೇ ಸಾಲ-ಸೋಲ ಮಾಡಿ ದುಡ್ಡು ತಂದು ಅಡ್ಡೆಯ ಮೇಲೆ ಸುರಿಯುವ ಮಧ್ಯಮ ವರ್ಗದ ಜನರ ಪಾಡು ಸೋತಾಗ ಹೇಳತೀರದು…
ಮಿಡ್ಲ್ ಕ್ಲಾಸ್ ಜನರ ಬವಣೆಗಳನ್ನು ತೋರಿಸುವ, ಪ್ರೀತಿಯನ್ನು ಆರಾಧಿಸುವ ನಿರ್ದೇಶಕ ಶಶಾಂಕ್ ಈ ಬಾರಿ ಕ್ರಿಕೆಟ್ ಮೇಲೆ ಕಣ್ಣಾಯಿಸಿದ್ದಾರೆ. ಹೇಗೆಲ್ಲ ಜನರನ್ನು ದಲ್ಲಾಳಿಗಳು ಮಂಗ ಮಾಡುತ್ತಾರೆ ಎಂಬ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ಒಂದಕ್ಕೆ ಹತ್ತು ಪಟ್ಟು ಕಾಸು ಮಾಡುವ ಸುಲಭ ಮಾರ್ಗವಿದು ಎಂದು ನಂಬಿಕೊಂಡವರ ಕಣ್ಣು ತೆರೆಸುವ ಕಥೆಯಿದೆ… ಕಾಸು ಕಳೆದುಕೊಂಡವರ ವ್ಯಥೆಯೂ ಇದೆ.
ಡಾರ್ಲಿಂಗ್ ಕೃಷ್ಣ ಇಲ್ಲಿ ಮತ್ತಷ್ಟು ಮಾಗಿದ್ದಾರೆ. ತಮ್ಮದೇ ಸ್ವಾಗ್‌ನಲ್ಲಿ ಮಿಂಚು ಹರಿಸಿದ್ದಾರೆ. ತರಲೆ ಹುಡುಗನಾಗಿ, ರಗಡ್ ಬಾಯ್ ರೂಪದಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಈ ಚಿತ್ರದ ಮೂಲಕ ಬೌಂಡರಿ ಆಚೆಗೆ ಬಾಲ್ ಹೋಗುವಂತೆ ಜೋರಾಗಿಯೇ ಬ್ಯಾಟಿಂಗ್ ಮಾಡಿರುವುದು ಕೃಷ್ಣನ ಹೆಚ್ಚುಗಾರಿಕೆ.
ಶಾರ್ಟ್ ಕಟ್ ಮೂಲಕ ಬೇಗ ಬೇಗ ದುಡ್ಡು ಮಾಡಲು ಹೋಗುವ ಮಧ್ಯಮ ವರ್ಗದ ಹುಡುಗನ ‘ಕೃಷ್ಣಾವತಾರ’ಗಳ ದರ್ಶನ ಮಾಡಿಸಿದ್ದಾರೆ ಶಶಾಂಕ್. ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ಮನರಂಜನಾ ಪರಿಧಿಯಲ್ಲೇ ಕಟ್ಟಿ ಕೊಡುವಲ್ಲಿ ನಿರ್ದೇಶಕರ ಶ್ರಮ ಸಫಲವಾಗಿದೆ.
ನಾಯಕಿ ಮನಿಷಾ ಇದ್ದಷ್ಟು ಹೊತ್ತು ತಂಗಾಳಿ ಬೀಸಿದಂತೆ ಭಾಸವಾಗುತ್ತದೆ. ಡ್ರ್ಯಾಗನ್ ಮಂಜು ಆಗಾಗ ನಗಿಸುತ್ತಾರೆ, ಕೆಲವೊಮ್ಮೆ ಹೆದರಿಸುತ್ತಾರೆ. ರಮೇಶ್ ಇಂದಿರಾ, ಅಚ್ಯುತ್ ನಟನೆ ಅಚ್ಚುಕಟ್ಟು. ಅರ್ಜುನ್ ಜನ್ಯ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು.


























