Home Advertisement
Home ಸಿನಿ ಮಿಲ್ಸ್ Movie Review: ಬಿಚ್ಚುಗತ್ತಿ ಬಂಟನ ಹೋರಾಟದ ಕಥೆ-ವ್ಯಥೆ

Movie Review: ಬಿಚ್ಚುಗತ್ತಿ ಬಂಟನ ಹೋರಾಟದ ಕಥೆ-ವ್ಯಥೆ

0
218

ಚಿತ್ರ: ಬಿಚ್ಚುಗತ್ತಿಯ ಬಂಟನ ಬಲ್ಲಿರೇನ
ನಿರ್ದೇಶನ: ಅನಿಲ್ ದೊರಸಮುದ್ರ
ನಿರ್ಮಾಣ: ಅನಿಲ್ ದೊರಸಮುದ್ರ
ತಾರಾಗಣ: ಚೆಲುವ ರಾಜ್, ಬಾಸುಮ, ಸ್ವೀಡಲ್, ಶೈಲೇಶ್ ಹಾಗೂ ತಾರಾನಾಥ್ ಇತರರು.

ರಾಜೀ

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರ ‘ಚೋಮನ ದುಡಿ’ ಚಿತ್ರ ಬಿಡುಗಡೆಯಾಗಿ ನಿಖರವಾಗಿ ೫೦ ವರ್ಷಗಳು ಕಳೆದಿವೆ. ಅದರ ಮುಂದುವರಿದ ಭಾಗವೆಂಬಂತೆ ‘ಬಿಚ್ಚುಗತ್ತಿಯ ಬಂಟನ ಬಲ್ಲರೇನ’ ಸಿನಿಮಾ ಸಿದ್ಧಗೊಂಡಿದೆ. ಆದರೆ ಇದು ಹೋರಾಟದ ಕಥನ ಎಂಬುದು ವಿಶೇಷ.

‘ದುಡಿಯ ಸದ್ದಿಗೆ ಕ್ರಾಂತಿಯು ಎದ್ದಿದೆ’ ಎಂಬುದು ಶೀರ್ಷಿಕೆಯ ಅಡಿಬರಹ. ಇದರಿಂದಲೇ ಚೋಮನ ಹೋರಾಟದ ನಾದವು ಹೊಸ ಪೀಳಿಗೆಗೆ ತಲುಪುವ ಪ್ರಯತ್ನ ಮಾಡಲಾಗಿದೆ. ಚೋಮನ ದುಡಿಯ ಭೂಮಿಯ ಕನಸನ್ನು ವಿಸ್ತರಿಸುವ ‘ಕಾಳ’ನ ಹೋರಾಟ ಕಥೆಯನ್ನು ಮುಂದುವರಿಸುತ್ತದೆ.

ಚೋಮ ಅಂದು ತನ್ನ ಭೂಮಿಗಾಗಿ ಶಾಂತವಾಗಿ, ತಾಳ್ಮೆಯಿಂದ ಹೋರಾಡಿದರೂ ಅವನಿಗೆ ನ್ಯಾಯ ಸಿಗಲಿಲ್ಲ. ಈ ಚಿತ್ರದಲ್ಲಿ ಅವನ ಮಗ ಕಾಳ, ತಂದೆಯ ದಾರಿ ಹಿಡಿಯದೆ ‘ಬಿಚ್ಚುಗತ್ತಿ’ ದಂಗೆಯ ಸಂಕೇತದ ಕುಡುಗೋಲು ಹಿಡಿದು ಹೋರಾಟ ಮುಂದುವರಿಸುತ್ತಾನೆ. ‘ಚೋಮನ ದುಡಿ’ಯ ಕಥೆ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ನಡೆದಿದ್ದರೆ, ‘ಬಿಚ್ಚುಗತ್ತಿ ಬಂಟನ ಬಲ್ಲಿರೇನ’ ಕಥೆ ಬ್ರಿಟಿಷರು ಭಾರತ ತೊರೆಯುವ ಮುನ್ನ ಸ್ವಾತಂತ್ರ್ಯ ಹೋರಾಟದ ಘಟ್ಟದಲ್ಲಿ ಸಾಗುತ್ತದೆ.

ಭೂಮಿಯ ಒಡೆತನಕ್ಕಾಗಿ ಸಾಗುವ ಈ ಸಂಘರ್ಷದಲ್ಲಿ ಚೋಮನ ಈಡೇರದ ಕನಸು. ಕಾಳನ ರೂಪದಲ್ಲಿ ಭೂಮಿಯ ಕನಸು ನಿಜವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತದೆ. ಕಾಲರೂಪ ಬದಲಾದರೂ, ಶೋಷಣೆ, ವೇದನೆಗಳಿಗೆ ಕೊನೆಯಿಲ್ಲವೆ ಎಂಬ ಕೂಗು ಈ ಚಿತ್ರದಲ್ಲಿ ಅಡಗಿದೆ.

ಲ್ಯಾಮರಿಂಜ್ ನಿರ್ಮಲ್ ಛಾಯಾಗ್ರಹಣ, ನೈಜ ಗ್ರಾಮೀಣ ದೃಶ್ಯವಿನ್ಯಾಸ ಈ ಚಿತ್ರಕ್ಕೆ ಆ ಕಾಲದ ಆಳವನ್ನು ನೀಡುತ್ತದೆ. ಸಂಗೀತ, ಸಾಹಿತ್ಯ ಹಾಗೂ ತಾಂತ್ರಿಕತೆ ಎಲ್ಲವೂ ಅಚ್ಚುಕಟ್ಟಾಗಿ ಹೊಂದಿಕೊಂಡಿದೆ. ಶ್ರೀಶಾಸ್ತ ಸಂಗೀತ ಸಂಯೋಜನೆ ಚಿತ್ರದ ತಳಹದಿಯನ್ನು ಮತ್ತಷ್ಟು ಬಲಪಡಿಸುತ್ತವೆ.

ಅನಿಲ್ ದೊರಸಮುದ್ರ ನಿರ್ದೇಶನ, ಚೋಮನ ಪಾತ್ರವನ್ನು ಚಿತ್ರದಲ್ಲಿ ಆಗಾಗ ನೆನಪಿಸುವ ರೀತಿಯಲ್ಲಿ ಜೋಡಿಸಿ, ಕಾರಂತರ ಚೋಮನ ದುಡಿಯನ್ನು ಮಾಸದಂತೆ ಕಟ್ಟಿಕೊಡುತ್ತದೆ. ಚಿತ್ರದ ಬಹುಭಾಗವನ್ನು ಕಾರ್ಕಳದ ನೈಸರ್ಗಿಕ ಸೌಂದರ್ಯದ ಮಧ್ಯೆಯಲ್ಲಿ ಚಿತ್ರೀಕರಿಸಿದ್ದು, ಕಥೆಯ ಭಾವನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

LEAVE A REPLY

Please enter your comment!
Please enter your name here