ಸಚಿವ ಸಂತೋಷ್ ಲಾಡ್–ನಟ ಆದಿತ್ಯ ಪ್ರಮುಖ ಪಾತ್ರಗಳಲ್ಲಿ: ಜನವರಿ 16ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ
ಬೆಂಗಳೂರು: ಕನ್ನಡ ಭಾಷೆ, ಸರ್ಕಾರಿ ಶಾಲೆಗಳು ಹಾಗೂ ಶಿಕ್ಷಣದ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ಸಾರುವ ಉದ್ದೇಶದೊಂದಿಗೆ ತಯಾರಾಗಿರುವ “ಭಾರತಿ ಟೀಚರ್” ಸಿನಿಮಾ ಜನವರಿ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಸಮಾಜಮುಖಿ ವಿಷಯವನ್ನು ಒಳಗೊಂಡಿರುವ ಈ ಚಿತ್ರ ಈಗಾಗಲೇ ತನ್ನ ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸಚಿವ ಸಂತೋಷ್ ಲಾಡ್–ನಟ ಆದಿತ್ಯ ಪ್ರಮುಖ ಪಾತ್ರಗಳಲ್ಲಿ: ಈ ಚಿತ್ರದ ಪ್ರಮುಖ ವಿಶೇಷವೆಂದರೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ನಟ ಆದಿತ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವುದು. ಸಚಿವ ಸಂತೋಷ್ ಲಾಡ್ ಅವರ ವಿಶೇಷ ಪಾತ್ರ ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಸಿಹಿಕಹಿ ಚಂದ್ರು, ಯಶಿಕಾ, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರೋಹಿತ್ ರಾಘವೇಂದ್ರ, ಸೌಜನ್ಯಾ ಸುನಿಲ್, ಎಂ.ಜೆ. ರಂಗಸ್ವಾಮಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ
ನಿರ್ಮಾಣ ಮತ್ತು ತಾಂತ್ರಿಕ ತಂಡ: ಈ ಚಿತ್ರವನ್ನು ರಾಘವೇಂದ್ರ ರೆಡ್ಡಿ ನಿರ್ಮಾಣ ಮಾಡಿದ್ದು, ಗುರುರಾಜ್ ರೆಡ್ಡಿ ಸಹ-ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಎಂ.ಎಲ್. ಪ್ರಸನ್ನ ಅವರು ನಿರ್ದೇಶನ, ಸಂಗೀತ ಮತ್ತು ಸಾಹಿತ್ಯದ ಹೊಣೆ ಹೊತ್ತಿದ್ದು, ಇದು ಚಿತ್ರದ ಮತ್ತೊಂದು ವಿಶೇಷವಾಗಿದೆ.
ಕಥೆಯ ಕೇಂದ್ರಬಿಂದು – ಭಾರತಿ: ಚಿತ್ರದ ಕಥೆ ಏಳನೇ ತರಗತಿಯಲ್ಲಿ ಓದುತ್ತಿರುವ ಭಾರತಿ ಎಂಬ ಬಾಲಕಿಯ ಸುತ್ತ ಸಾಗುತ್ತದೆ. ತನ್ನ ಊರಿನ ಪ್ರತಿಯೊಬ್ಬರೂ ಕನ್ನಡದಲ್ಲಿ ಓದಲು–ಬರೆಯಲು ಕಲಿಯಬೇಕು ಎಂಬ ದೃಢ ಸಂಕಲ್ಪ ಹೊಂದಿರುವ ಭಾರತಿ, ಆ ಕನಸನ್ನು ನನಸಾಗಿಸಲು ಎದುರಿಸುವ ಸವಾಲುಗಳು, ಅಡೆತಡೆಗಳು, ನೋವು–ನಲಿವು ಹಾಗೂ ಹೋರಾಟವೇ ಚಿತ್ರದ ಹೃದಯವಾಗಿದೆ.
ಇದನ್ನೂ ಓದಿ: ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ
ಭಾರತಿಯ ಕನಸಿಗೆ ಶಿಕ್ಷಕರು ಬೆಂಬಲವಾಗಿ ನಿಂತು ಧೈರ್ಯ ತುಂಬುವ ಕಥಾನಕವನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದ್ದು, ಇದು ಪ್ರೇಕ್ಷಕರ ಮನಮುಟ್ಟುವಂತೆ ಮೂಡಿಬಂದಿದೆ.
10 ಹಾಡುಗಳು, 40 ದಿನಗಳ ಚಿತ್ರೀಕರಣ: ಚಿತ್ರದಲ್ಲಿ ಒಟ್ಟು 10 ಹಾಡುಗಳು ಇದ್ದು, ಸಂಗೀತಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಮಳವಳ್ಳಿ, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಾಗಿದೆ.
ಇದನ್ನೂ ಓದಿ: ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?
₹50 ಟಿಕೆಟ್ ದರ – ಜನಸಾಮಾನ್ಯರಿಗೆ ಸಿನಿಮಾ: ಸಿನಿಮಾ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವ ಉದ್ದೇಶದಿಂದ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ₹50 ಟಿಕೆಟ್ ದರ ನಿಗದಿಪಡಿಸಲಾಗಿದೆ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಭಾರತಿ ಟೀಚರ್” ಸಿನಿಮಾ ಬಿಡುಗಡೆಯಾಗಲಿದ್ದು, ಕನ್ನಡಪರ ಹಾಗೂ ಶಿಕ್ಷಣಪರ ಚಿತ್ರಗಳಿಗೆ ಇದು ಹೊಸ ಆಶಾಕಿರಣವಾಗಲಿದೆ.























