Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ

0
1

ಚಿತ್ರ: ಭಾರತಿ ಟೀಚರ್ 7ನೇ ತರಗತಿ
ನಿರ್ದೇಶನ: ಎಂ.ಎಲ್.ಪ್ರಸನ್ನ
ನಿರ್ಮಾಣ: ರಾಘವೇಂದ್ರ ರೆಡ್ಡಿ
ತಾರಾಗಣ: ಕು. ಯಶಿಕಾ, ಸಿಹಿ ಕಹಿ ಚಂದ್ರು, ಗೋವಿಂದೇ ಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್ ಹಾಗೂ ಆದಿತ್ಯ, ಸಂತೋಷ್ ಲಾಡ್ (ಅತಿಥಿ ಪಾತ್ರಗಳಲ್ಲಿ) ಮತ್ತಿತರರು.
ರೇಟಿಂಗ್ಸ್: 3

ಗಣೇಶ್ ರಾಣೆಬೆನ್ನೂರು

ತಾವು ಓದಿ ವಿದ್ಯಾವಂತರಾದ ಸ್ಕೂಲಿಗೆ, ಆಡಿ ಬೆಳೆದ ಹಳ್ಳಿಗೆ ತಾವೂ ಏನಾದರೂ ಕೊಡುಗೆ ಕೊಡಬೇಕು ಎಂದು ಸಾಕಷ್ಟು ಮಂದಿಗೆ ಹೊಳೆದಿರುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿಗತಿ ಅಡ್ಡಿ ಬರಬಹುದು… ಕೆಲವರಿಗೆ ಎಷ್ಟೇ ಬಂದರೂ ಇನ್ನೂ ಬರಲಿ… ಎಂದು ಕಾಯುತ್ತಿರುತ್ತಾರೆ. ಆದರೆ ಊರಿಗೆ, ಶಾಲೆಗೆ ಕಾಯಕಲ್ಪ ಆಗಬೇಕೆಂದರೆ ಯಾರಾದರೂ ಮುಂದೆ ಬರಲೇಬೇಕು. ಎಲ್ಲಾ ಕಾರ್ಯಗಳಿಗೂ ದುಡ್ಡೊಂದೇ ಮುಖ್ಯವಲ್ಲ; ವಿದ್ಯಾ ದಾನವೂ ಶ್ರೇಷ್ಠ ಎಂಬ ವಿಷಯವನ್ನು `ಭಾರತಿ ಟೀಚರ್’ ಹೇಳಿಕೊಡುವ ಪಾಠ.

ಅಂದಹಾಗೆ ಭಾರತಿ ಏಳನೇ ತರಗತಿಯ ವಿದ್ಯಾರ್ಥಿ. ತನ್ನ ಊರಿನ ಪ್ರತಿಯೊಬ್ಬರೂ ಅಕ್ಷರಸ್ಥರಾಗಬೇಕು ಎಂದು ಬಯಸಿ, ಅವಳೇ ವಿದ್ಯಾ ದಾನ ಮಾಡುವ ಮೂಲಕ ಗುರುವಾಗುವುದು `ಭಾರತಿ ಟೀಚರ್ 7ನೇ ತರಗತಿ’ ಕಥೆ-ಚಿತ್ರಕಥೆ. ಈ ಕ್ರಾಂತಿ ಮಾಡಲು ಆಕೆ ಏನೆಲ್ಲ ಪಡಿಪಾಟಲು ಪಡಬೇಕಾಯಿತು, ಹೇಗೆಲ್ಲಾ ಯೋಜನೆ ರೂಪುಗೊಂಡಿತ್ತು ಎಂಬುದೇ ಚಿತ್ರದ ಒಟ್ಟಾರೆ ಸಾರಾಂಶ. ಪಾಠ ಮಾಡಲು ಮುಂದಾದ ಭಾರತಿ, ಆ ಕಾರ್ಯದಲ್ಲಿ ಯಶ ಸಾಧಿಸುತ್ತಾಳಾ ಎಂಬುದು ಅಂತಿಮ ಹಂತದ ಹಣಾಹಣಿ…

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಒಂದು ಸರಳ ಕಥೆಯನ್ನು ಮನ ಮುಟ್ಟುವಂತೆ ಹೆಣೆದಿದ್ದಾರೆ ನಿರ್ದೇಶಕ ಎಂ.ಎಲ್.ಪ್ರಸನ್ನ. ಬಹುತೇಕ ಗ್ರಾಮೀಣ ಭಾಗದಲ್ಲೇ ನಡೆಯುವ ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳಿವೆ… ಹಾಸ್ಯ ದೃಶ್ಯಗಳು ಆಗಾಗ ಬಂದು ಹೋಗುತ್ತವೆ. ಪಾತ್ರಧಾರಿಗಳ ಲವಲವಿಕೆ, ಹಳ್ಳಿ ಸೊಗಡು ಸಿನಿಮಾದ ತುಂಬೆಲ್ಲ ಹಾಸು ಹೊಕ್ಕಾಗಿದೆ. ಸಾಮಾಜಿಕ ಕಾಳಜಿ ಹೊಂದಿರುವ ಈ ಸಿನಿಮಾದಲ್ಲಿ ಸಂದೇಶವೂ ಅಡಕವಾಗಿದೆ.

ಭಾರತಿ ಟೀಚರ್ ಪಾತ್ರದಲ್ಲಿ ಕು. ಯಶಿಕಾ ಚೆನ್ನಾಗಿಯೇ ಪಾಠ ಮಾಡುತ್ತಾರೆ. ಸಿಹಿ ಕಹಿ ಚಂದ್ರು, ಗೋವಿಂದೇ ಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್ ಇತರರು ಆಯಾ ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. ಆದಿತ್ಯ, ಸಂತೋಷ್ ಲಾಡ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ..’ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

ನಟನೆಯ ವಿಚಾರಕ್ಕೆ ಬಂದರೆ, ಸಂಪೂರ್ಣ ಚಿತ್ರವನ್ನು ಹೊತ್ತುಕೊಂಡಿರುವುದು ಕುಮಾರಿ ಯಶಿಕಾ. ಭಾರತಿ ಪಾತ್ರದಲ್ಲಿ ಆಕೆ ತೋರಿದ ಸಹಜ ಅಭಿನಯ, ಭಾವನೆಗಳ ನಿರ್ವಹಣೆ ಮನಸ್ಸಿಗೆ ತಾಕುತ್ತದೆ. ಕನ್ನಡ ಚಿತ್ರರಂಗಕ್ಕೆ ಭವಿಷ್ಯದ ಭರವಸೆಯ ಕಲಾವಿದೆಯಾಗಿ ಕಾಣಿಸಿಕೊಳ್ಳುವ ಎಲ್ಲ ಲಕ್ಷಣಗಳು ಆಕೆಯಲ್ಲಿ ಕಾಣಿಸುತ್ತವೆ. ರೋಷಾವೇಶದ ರಾಜಶೇಖರ್ ಪಾತ್ರದಲ್ಲಿ ರೋಹಿತ್ ರಾಘವೇಂದ್ರ ತಮ್ಮ ಪಾತ್ರಕ್ಕೆ ಖಡಕ್‌ತನ ನೀಡಿದ್ದಾರೆ. ಇನ್ನಷ್ಟು ಪರಿಪಕ್ವತೆ ಬಂದರೆ ಅವರು ಇನ್ನೂ ದೊಡ್ಡ ಮಟ್ಟಕ್ಕೆ ಏರಬಹುದಾದ ಪ್ರತಿಭೆ. ಹಿರಿಯ ನಟ ಸಿಹಿಕಹಿ ಚಂದ್ರು ಊರಿನ ಶಿಕ್ಷಕನ ಪಾತ್ರಕ್ಕೆ ತಮ್ಮ ಅನುಭವದ ಮುದ್ರೆ ಒತ್ತಿದ್ದಾರೆ.

ಒಟ್ಟಿನಲ್ಲಿ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾ ಕೇವಲ ಕಥೆಯಲ್ಲ, ಅದು ಶಿಕ್ಷಣದ ಮಹತ್ವ, ಕನ್ನಡ ಭಾಷೆಯ ಅಗತ್ಯತೆ ಮತ್ತು ಸರ್ಕಾರಿ ಶಾಲೆಗಳ ಪಾತ್ರವನ್ನು ನೆನಪಿಸುವ ಸಿನಿ ಸಂದೇಶ. ನಟ ಆದಿತ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್​​ ಲಾಡ್​​ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕುಟುಂಬ ಸಮೇತ ನೋಡಬಹುದಾದ, ವಿಶೇಷವಾಗಿ ಕನ್ನಡಿಗರು ತಪ್ಪದೇ ಅನುಭವಿಸಬೇಕಾದ ಚಿತ್ರವಾಗಿದೆ.

Previous articleಕುಡಿಯವ ನೀರು ಪೂರೈಸುವ ಝರಿ ನೀರಿನಲ್ಲಿ ಸತ್ತ ಕಾಡುಪ್ರಾಣಿಯ ಶವ