ಚಿತ್ರ: ಅಮೃತ ಅಂಜನ್
ನಿರ್ದೇಶನ: ಜ್ಯೋತಿರಾವ್ ಮೋಹಿತ್
ನಿರ್ಮಾಣ: ಲೋಕೇಶ್ ನಾಗಪ್ಪ
ತಾರಾಗಣ: ಸುಧಾಕರ್ ಗೌಡ,
ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ನವೀನ್ ಡಿ ಪಡೀಲ್ ಶ್ರೀಭವ್ಯ ಹಾಗೂ ಮಧುಮತಿ ಮುಂತಾದವರು.
ರೇಟಿಂಗ್: ⭐⭐⭐ (3/5)
– ಜಿ.ಆರ್.ಬಿ
ಮದಿರೆ–ಮಡದಿ–ಮೋಹ, ಮಮಕಾರ–ಮಂದಹಾಸಗಳ ಸೊಗಸಾದ ಸಮ್ಮಿಶ್ರಣವೇ ‘ಅಮೃತ ಅಂಜನ್’ ಸಿನಿಮಾ.
ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಹೆಸರು ಮಾಡಿದ ತಂಡವೇ ತಮ್ಮ ಕಥೆಯನ್ನು ವಿಸ್ತಾರಗೊಳಿಸಿ, ದೊಡ್ಡ ತೆರೆಗೆ ತರುವ ಪ್ರಯತ್ನವೇ ಈ ಚಿತ್ರ. ನಗುವಿನ ಜೊತೆಗೆ ಸಂಬಂಧಗಳ ಮೌಲ್ಯವನ್ನು ಹೇಳುವ ಪ್ರಯತ್ನದಲ್ಲಿ ‘ಅಮೃತ ಅಂಜನ್’ ತನ್ನದೇ ಶೈಲಿಯಲ್ಲಿ ಮೂಡಿಬಂದಿದೆ.
ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿದ್ದ ಕೆಲ ಅಂಶಗಳು ಮತ್ತು ದೃಶ್ಯಗಳನ್ನು ನಿರ್ದೇಶಕ ಜ್ಯೋತಿರಾವ್ ಮೋಹಿತ್ ಸಿನಿಮಾದೊಳಗೆ ಮತ್ತಷ್ಟು ಲಂಬಿಸಿ ಸೇರಿಸಿದ್ದಾರೆ. ಹೀಗಾಗಿ ಕೆಲವೆಡೆ ಚಿತ್ರವು ಇನ್ನೂ ಕಿರುಚಿತ್ರ ಮಾದರಿಯಲ್ಲೇ ಸಾಗುತ್ತದೆ. ಕೆಲವು ಸನ್ನಿವೇಶಗಳು ಯೂಟ್ಯೂಬ್ ಸ್ಕೆಚ್‌ಗಳ ಛಾಯೆಯಲ್ಲೇ ಮೂಡಿಬಂದಿದ್ದು, ಪೂರ್ಣ ಪ್ರಮಾಣದ ಸಿನಿಮಾಗೆ ಬೇಕಾದ ನಿರೂಪಣೆಯಿಂದ ಸ್ವಲ್ಪ ದೂರ ಉಳಿದಂತಿದೆ ಎಂಬ ಭಾವ ಮೂಡಿಸುತ್ತದೆ.
ಇದನ್ನೂ ಓದಿ: Movie Review ‘ಸೀಟ್ ಎಡ್ಜ್’: ಯೂಟ್ಯೂಬರ್ ಭೂತಲೋಕ
ಆದರೂ ‘ಅಮೃತ ಅಂಜನ್’ ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಚಿತ್ರ ಹೃದಯಸ್ಪರ್ಶಿಯಾಗಿ ತೋರಿಸಿದೆ. ತಂದೆಯ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಅವರ ಗಂಭೀರ ಮತ್ತು ಭಾವನಾತ್ಮಕ ಅಭಿನಯ ಪ್ರೇಕ್ಷಕರನ್ನು ತಟ್ಟುತ್ತದೆ. ಅವರ ಪಾತ್ರವು ಕಥೆಗೆ ತೂಕ ಮತ್ತು ಆಳವನ್ನು ನೀಡುತ್ತದೆ.
ನಾಯಕ ಸುಧಾಕರ್ ಗೌಡ ಮತ್ತು ನಾಯಕಿ ಪಾಯಲ್ ಚಂಗಪ್ಪ ನಡುವಿನ ಕೆಮಿಸ್ಟ್ರಿ ಕೆಲವೆಡೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಹಾಸ್ಯದ ಹೊರೆ ಚಿತ್ರವನ್ನು ಮುನ್ನಡೆಸುವಲ್ಲಿ ಗೌರವ್ ಶೆಟ್ಟಿ ಅವರ ಕಾಮಿಡಿ ಟೈಮಿಂಗ್ ಪ್ರಮುಖ ಹೈಲೈಟ್ ಆಗಿದೆ. ಅವರ ಪಾತ್ರ ಪ್ರೇಕ್ಷಕರಿಗೆ ಸಹಜ ನಗುವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ
ಬಿಂದಾಸ್ ಬದುಕಿನ ಹಂಬಲದಲ್ಲಿ, ದುಡಿಮೆಯ ಮೌಲ್ಯವನ್ನು ಅರಿಯದೆ ಮದಿರೆಯ ಮೊರೆ ಹೋಗುವ ಯುವಜನತೆಗೆ ಕಾಲತಕ್ಕ ಪಾಠ ಕಲಿಸುವ ಸಂದೇಶವೂ ಚಿತ್ರದಲ್ಲಿದೆ. ಮಧ್ಯಮ ವರ್ಗದ ಬದುಕು, ಪ್ರೀತಿ, ಕುಟುಂಬ ಸಂಬಂಧಗಳು ಹಾಗೂ ಪೋಷಕರ ತ್ಯಾಗ – ಇವೆಲ್ಲವನ್ನೂ ಹಾಸ್ಯದ ಮೂಲಕವೇ ಸುಂದರವಾಗಿ ಹೇಳುವ ಪ್ರಯತ್ನವನ್ನು ಚಿತ್ರ ಮಾಡಿದೆ.
ಯುವಕರು ತಮ್ಮ ಪೋಷಕರ ತ್ಯಾಗವನ್ನು ಅರ್ಥಮಾಡಿಕೊಳ್ಳದೆ ದಾರಿ ತಪ್ಪುವ ಸಂಗತಿಯನ್ನು ಉಪದೇಶದ ಶೈಲಿಯಿಲ್ಲದೆ, ಹಾಸ್ಯ ಮತ್ತು ಭಾವನೆಯ ಮೂಲಕವೇ ಹೇಳಲಾಗಿದೆ. ಅಮೃತಾಂಜನ್ ಮುಲಾಮು ಹೇಗೆ ತಲೆನೋವನ್ನು ಶಮನಗೊಳಿಸುತ್ತದೆಯೋ, ಹಾಗೆಯೇ ಈ ಸಿನಿಮಾ ಬೇಸರವನ್ನು ದೂರ ಮಾಡಿ ಮನಸ್ಸಿಗೆ ರಿಲೀಫ್ ನೀಡುವ ‘ಸಿನಿ ಟಾನಿಕ್’ ಎಂಬ ರೂಪಕವನ್ನು ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.























