ತನ್ನದೆ ಪ್ರತಿಭೆಯ ಮೇಲೆ ನಟನಾರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿ, ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಖ್ಯಾತ ನಟಿ ಮತ್ತು ನಿರೂಪಕಿ ಸುಷ್ಮಾ ರಾವ್ ಗುಪ್ತವಾಗಿಟ್ಟಿದ್ದ ‘ಪುಟ್ಟ ಪ್ರಪಂಚ’ ಬಹಿರಂಗವಾಗಿದೆ.
ಹೌದು, ಕನ್ನಡ ಕಿರುತೆರೆಯ ಇತಿಹಾಸದಲ್ಲಿ ‘ಭಾವನಾ’ ಎಂದೇ ಚಿರಪರಿಚಿತರಾದ ನಟಿ, ನಿರೂಪಕಿ ಸುಷ್ಮಾ ರಾವ್ ಸದ್ಯ ಸಂಚಲನ ಮೂಡಿಸಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಮೂಲಕ ಪ್ರತಿ ಮನೆಯ ಮಗಳಾಗಿ ಗುರುತಿಸಿಕೊಂಡಿರುವ ಸುಷ್ಮಾ, ಇಷ್ಟು ದಿನಗಳ ಕಾಲ ತಾವು ಕಾಪಾಡಿಕೊಂಡು ಬಂದಿದ್ದ ರಹಸ್ಯವೊಂದನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಸುಷ್ಮಾ ರಾವ್ ಮರು ಮದುವೆಯಾಗಿದ್ದು, ಅವರಿಗೆ ಒಬ್ಬ ಮುದ್ದಾದ ಮಗನೂ ಇದ್ದಾನೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ.
ವೈಯಕ್ತಿಕ ಬದುಕಿನ ಏರಿಳಿತಗಳು: ಸುಷ್ಮಾ ರಾವ್ ಅವರ ಜೀವನ ತೆರೆದ ಪುಸ್ತಕವೇನೂ ಆಗಿರಲಿಲ್ಲ. ವೃತ್ತಿಜೀವನದ ಆರಂಭದಲ್ಲಿ ಖ್ಯಾತ ಚಿತ್ರ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನ ವಿವಾಹವಾಗಿದ್ದ ಸುಷ್ಮಾ, ನಂತರದ ದಿನಗಳಲ್ಲಿ ಕೆಲವು ಕಾರಣಾಂತರಗಳಿಂದ ವಿಚ್ಛೇದನ ಪಡೆದು ದೂರವಾಗಿದ್ದರು.
ಹಾಗೇ ವಿಚ್ಛೇದನದ ನಂತರ ತಮ್ಮನ್ನು ಸಂಪೂರ್ಣವಾಗಿ ನಟನೆ ಮತ್ತು ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದರು. ಜೀವನದಲ್ಲಿ ಎದುರಾದ ನೋವುಗಳನ್ನು ನುಂಗಿ, ಸ್ಮೈಲಿಂಗ್ ಫೇಸ್ನಿಂದಲೇ ಕ್ಯಾಮರಾ ಎದುರಿಸುತ್ತಿದ್ದ ಸುಷ್ಮಾ ವೈಯಕ್ತಿಕ ಜೀವನದ ಬಗ್ಗೆ ಅನೇಕ ಊಹಾಪೋಹಗಳಿದ್ದವು. ಆದರೆ ಇದುವರೆಗು ಎಲ್ಲೂ ತಮ್ಮ ಎರಡನೇ ಮದುವೆಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.
ಸತ್ಯ ಮುಚ್ಚಿಟ್ಟಿದ್ದು ಯಾಕೆ?: ಇಷ್ಟು ದಿನಗಳ ಕಾಲ ಸುಷ್ಮಾ ತಮ್ಮ ಪತಿ ಮತ್ತು ಮಗನನ್ನು ಪರಿಚಯಿಸದೆ ಇದ್ದುದಕ್ಕೆ ಕಾರಣ, ಖಾಸಗಿತನದ ಆದ್ಯತೆ ನೀಡಿ. ಅಲ್ಲದೇ, ಗ್ಲಾಮರ್ ಪ್ರಪಂಚದಲ್ಲಿರುವ ನಟಿಯರಿಗೆ ತಮ್ಮ ವೈಯಕ್ತಿಕ ಬದುಕನ್ನು ಸಾರ್ವಜನಿಕ ಚರ್ಚೆಗೆ ಬಿಡುವುದು ಇಷ್ಟವಿರುವುದಿಲ್ಲ.
ವಿಶೇಷವಾಗಿ ಹಿಂದಿನ ಕಹಿ ಘಟನೆಗಳ ನಂತರ, ಹೊಸದಾಗಿ ಕಟ್ಟಿಕೊಂಡ ಸಂಸಾರಕ್ಕೆ ಯಾವುದೇ ಬಾಹ್ಯ ದೃಷ್ಟಿ ಬೀಳಬಾರದು ಎಂಬ ಮುನ್ನೆಚ್ಚರಿಕೆ ಅವರದ್ದಾಗಿತ್ತು. ತಮ್ಮ ವೃತ್ತಿ ಬದುಕಿನ ಸಾಧನೆ ಮಾತ್ರ ಜನರಿಗೆ ತಿಳಿಯಲಿ, ವೈಯಕ್ತಿಕ ಬದುಕು ನಾಲ್ಕು ಗೋಡೆಗಳ ಮಧ್ಯೆ ಇರಲಿ ಎಂಬುದು ಅವರ ಆಶಯವಾಗಿತ್ತು. ಆದರೆ ಈಗ ತಮ್ಮ ಪುಟ್ಟ ಪ್ರಪಂಚವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.
‘ಗುಪ್ತಗಾಮಿನಿ’ಯಿಂದ ‘ಭಾಗ್ಯಲಕ್ಷ್ಮೀ’ವರೆಗೆ: ಸುಷ್ಮಾ ರಾವ್ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ತಂದೆ ಪೊಲೀಸ್ ಅಧಿಕಾರಿಯಾಗಿದ್ದರೂ, ಸುಷ್ಮಾ ಅವರಿಗೆ ಒಲಿದಿದ್ದು ಕಲೆ. ಭರತನಾಟ್ಯ ನೃತ್ಯಗಾರ್ತಿ, ಕಾಲೇಜು ದಿನಗಳಲ್ಲೇ ಬಣ್ಣ ಹಚ್ಚಿದರು.
ಎಸ್ ನಾರಾಯಣ್ ಅವರ ‘ಭಗೀರಥಿ’ ಮೂಲಕ ಶುರುವಾದ ಪ್ರಯಾಣ, ‘ಗುಪ್ತಗಾಮಿನಿ’ಯ ಭಾವನಾ ಪಾತ್ರದ ಮೂಲಕ ಉತ್ತುಂಗಕ್ಕೇರಿತು. ಅಂದು ಹಾಕುತ್ತಿದ್ದ ‘ಭಾವನಾ ಓಲೆ’ ಇಡೀ ಕರ್ನಾಟಕದ ಹೆಣ್ಣುಮಕ್ಕಳಿಗೆ ಕ್ರೇಜ್ ಆಗಿತ್ತು. ಪ್ರಸ್ತುತ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಅತ್ತೆ-ಮಾವನ ಸೇವೆಯನ್ನು ಮಾಡುವ, ಪತಿಯಿಂದ ತಿರಸ್ಕಾರಕ್ಕೊಳಗಾದರೂ ಎದೆಗುಂದದ ‘ಭಾಗ್ಯ’ನ ಪಾತ್ರಕ್ಕೆ ಸುಷ್ಮಾ ಜೀವ ತುಂಬುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಹಾಗೇ ಇದೀಗ, ಸುಷ್ಮಾ ರಾವ್ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಈಗ ತಮ್ಮ ಪತಿ ಮತ್ತು ಮಗನ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಜೊತೆಗೆ ಅಭಿಮಾನಿಗಳು ನಟನೆಯಲ್ಲಿ ಮೆಚ್ಚಿದಂತೆ ನಿಜ ಜೀವನದಲ್ಲೂ ಸಹ ಮೆಚ್ಚಿ “ನಿಮ್ಮ ಧೈರ್ಯ ಮತ್ತು ಬದುಕನ್ನು ಎದುರಿಸಿದ ರೀತಿ ನಮಗೆ ಸ್ಫೂರ್ತಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನೋವುಗಳನ್ನು ಮೆಟ್ಟಿ ನಿಂತು ಹೊಸ ಬದುಕು ಕಟ್ಟಿಕೊಂಡ ಸುಷ್ಮಾ ರಾವ್ ಈ ನಡೆ ಅನೇಕರಿಗೆ ಮಾದರಿಯಾಗಿದೆ.









