SK Home Ad
Home ಸಿನಿ ಮಿಲ್ಸ್ ಮುಖ್ಯಮಂತ್ರಿಯನ್ನು ‘ಡಾರ್ಲಿಂಗ್’ ಎಂದ ನಟ ವಿಶಾಲ್; ವಿಜಯ್ ಹೆಸರಲ್ಲಿ ಮೂವರು ಬಾಲಕಿಯರ ವಿದ್ಯಾಭ್ಯಾಸಕ್ಕೆ ನೆರವು

ಮುಖ್ಯಮಂತ್ರಿಯನ್ನು ‘ಡಾರ್ಲಿಂಗ್’ ಎಂದ ನಟ ವಿಶಾಲ್; ವಿಜಯ್ ಹೆಸರಲ್ಲಿ ಮೂವರು ಬಾಲಕಿಯರ ವಿದ್ಯಾಭ್ಯಾಸಕ್ಕೆ ನೆರವು

0
137

ನಟ ವಿಶಾಲ್ ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್ ಸಿಎಂ ಆದ ಬಳಿಕ ಚಿತ್ರರಂಗದ ಪ್ರಮುಖರನ್ನ ಭೇಟಿಯಾಗುತ್ತಿದ್ದು, ಇತ್ತೀಚೆಗೆ ವಿಶಾಲ್ ಕೂಡ ಸಿಎಂ ಕಚೇರಿಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ಈ ಭೇಟಿಯ ವಿಶೇಷ ಕ್ಷಣ ಹಾಗೂ ವಿವರಗಳನ್ನು ವಿಶಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಭೇಟಿಯ ವೇಳೆ ವಿಶಾಲ್, ವಿಜಯ್‌ಗೆ ಯಾವುದೇ ಸಾಂಪ್ರದಾಯಿಕ ಹೂಗುಚ್ಛ ಅಥವಾ ಶಾಲನ್ನು ನೀಡಿ ಗೌರವಿಸಿಲ್ಲ. ಬದಲಿಗೆ ಆ ಹಣವನ್ನು ಸದ್ಬಳಕೆ ಮಾಡಿಕೊಂಡಿರುವ ವಿಶಾಲ್, ಸಿಎಂ ವಿಜಯ್ ಹೆಸರಿನಲ್ಲಿ ತಮಿಳುನಾಡಿನ ಮೂವರು ಬಡ ಹಾಗೂ ಅರ್ಹ ಬಾಲಕಿಯರ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದ್ದಾರೆ. ವಿಶಾಲ್ ಈ ವಿಭಿನ್ನ ಹಾಗೂ ಅರ್ಥಪೂರ್ಣ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಿಜಯ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿರುವ ವಿಶಾಲ್, “ಲಯೋಲಾ ಕಾಲೇಜು ದಿನಗಳಿಂದಲೂ ನಾನು ವಿಜಯ್ ಅವರನ್ನು ‘ಡಾರ್ಲಿಂಗ್’ ಎಂದೇ ಕರೆಯುತ್ತಿದ್ದೇನೆ. ಒಬ್ಬ ಸಾಮಾನ್ಯ ನಟನಾಗಿ ಪಯಣ ಆರಂಭಿಸಿ, ಟೀಕೆಗಳನ್ನು ಮೆಟ್ಟಿ ನಿಂತು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರೂ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಜ್ಯದ ಮುಖ್ಯಮಂತ್ರಿಯನ್ನು ಇಂದಿಗೂ ‘ಡಾರ್ಲಿಂಗ್’ ಎಂದು ಕರೆಯುವುದು ನನಗೆ ವಿಶೇಷ ಅನುಭವ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ವಿಶಾಲ್ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ ಸಾಮಾಜಿಕ ಕಾರ್ಯವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದ್ರೆ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಯೊಬ್ಬರನ್ನು ಸಾರ್ವಜನಿಕವಾಗಿ ‘ಡಾರ್ಲಿಂಗ್’ ಎಂದು ಸಂಬೋಧಿಸಿರುವುದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹಾಗೂ ಟೀಕೆ ವ್ಯಕ್ತಪಡಿಸಿದ್ದಾರೆ.