ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ವಿರುದ್ಧ 90 ಲಕ್ಷ ರೂ. ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಚಿಕ್ಕಮಗಳೂರು ಮೂಲದ ಕಾಫಿ ತೋಟದ ಮಾಲೀಕ ದೀಪಕ್ ಎಂಬುವವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ದೂರುದಾರ ದೀಪಕ್ ಅವರ ಹೇಳಿಕೆಯಂತೆ, ವಾರಸ್ದಾರ ಎಂಬ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಕಿಚ್ಚ ಸುದೀಪ್ ಅವರ ತಂಡ ದೀಪಕ್ ಅವರಿಗೆ ಸೇರಿದ ಕಾಫಿ ತೋಟ ಹಾಗೂ ಮನೆಯನ್ನು ಎರಡು ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಬಾಡಿಗೆಗೆ ಪಡೆದಿತ್ತು. ಆದರೆ, ಒಪ್ಪಂದದ ನಿಯಮ ಮೀರಿ ಕೇವಲ ಎರಡೇ ತಿಂಗಳಿಗೆ ಜಾಗವನ್ನು ಖಾಲಿ ಮಾಡಲಾಗಿದೆ. ಚಿತ್ರೀಕರಣದ ಸಮಯದಲ್ಲಿ ಕಾಫಿ ಗಿಡಗಳು ಹಾಗೂ ಮರಗಳನ್ನು ನಾಶಪಡಿಸಲಾಗಿದ್ದು, ಇದರಿಂದ ತಮಗೆ ಭಾರಿ ನಷ್ಟ ಉಂಟಾಗಿದೆ. ಎಂದು ಆರೋಪಿಸಿದ್ದಾರೆ.
ಈ ನಷ್ಟಕ್ಕೆ ಸಂಬಂಧಿಸಿದಂತೆ ದೀಪಕ್ 95 ಲಕ್ಷ ರೂಪಾಯಿ ಪರಿಹಾರ ಕೇಳಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ನಟ ಸುದೀಪ್, 60 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿ ರಾಜಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ರಾಜಿಯಾದ ನಂತರ ಇದುವರೆಗೆ ಕೇವಲ 10 ಲಕ್ಷ ರೂಪಾಯಿಯ ಚೆಕ್ ಮಾತ್ರ ನೀಡಲಾಗಿದೆ. ಬಾಕಿ ಉಳಿದಿರುವ 50 ಲಕ್ಷ ರೂಪಾಯಿಯನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.























