ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ‘45’ ಚಿತ್ರದ ಗ್ರ್ಯಾಂಡ್ ಟ್ರೇಲರ್ ಲಾಂಚ್ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿಯ ಶ್ರೀನಿವಾಸನಗರ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ನಿನ್ನೆ (ಡಿಸೆಂಬರ್ 15) ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ‘45’ ಸಿನಿಮಾದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಯಿತು.
ಈ ಟ್ರೇಲರ್‌ನಲ್ಲಿನ ಅತಿದೊಡ್ಡ ಅಚ್ಚರಿ ಎಂದರೆ ನಟ ಶಿವರಾಜ್ ಕುಮಾರ್ ಸ್ತ್ರೀ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣ ಅವರ ಈ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
ಶಿವರಾಜ್ ಕುಮಾರ್ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. 1996ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಅಣ್ಣಾವ್ರ ಮಕ್ಕಳು’ ಸಿನಿಮಾದಲ್ಲಿ ಶಿವಣ್ಣ ತ್ರಿಪಾತ್ರದಲ್ಲಿ ಅಭಿನಯಿಸಿ, ಮಹಿಳಾ ವೇಷದಲ್ಲಿ ವೇಶ್ಯಾವಾಟಿಕೆ ಮನೆ ಮೇಲೆ ದಾಳಿ ಮಾಡುವ ದೃಶ್ಯದಲ್ಲಿ ಗಮನ ಸೆಳೆದಿದ್ದರು. ಫಣಿ ರಾಮಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಅವರ ಲೇಡಿ ಅವತಾರ ಬಹಳ ಜನಪ್ರಿಯವಾಗಿತ್ತು.
ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು
ಇದಕ್ಕೂ ಮೊದಲು 1992ರಲ್ಲಿ ಬಿಡುಗಡೆಯಾದ ‘ಮಿಡಿದ ಶೃತಿ’ ಚಿತ್ರದಲ್ಲಿಯೂ ಶಿವರಾಜ್ ಕುಮಾರ್ ಮಹಿಳಾ ಪಾತ್ರದಲ್ಲಿ ನಟಿಸಿದ್ದರು. ಡ್ರಾಮಾ ಮತ್ತು ರೊಮ್ಯಾಂಟಿಕ್ ಶೈಲಿಯ ಈ ಸಿನಿಮಾವನ್ನು ಎಂ.ಎಸ್. ರಾಜಶೇಖರ್ ನಿರ್ದೇಶಿಸಿದ್ದರು ಹಾಗೂ ಎಸ್.ಎ. ಗೋವಿಂದರಾಜು ನಿರ್ಮಾಣ ಮಾಡಿದ್ದರು. ಇದೀಗ ಸುಮಾರು 33 ವರ್ಷಗಳ ಬಳಿಕ ‘45’ ಸಿನಿಮಾದಲ್ಲಿ ಮತ್ತೆ ಸ್ತ್ರೀ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವುದು ಸಿನಿಪ್ರೇಮಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಜನಸಾಗರದ ನಡುವೆ ನಡೆದ ಈ ಭವ್ಯ ಕಾರ್ಯಕ್ರಮದಲ್ಲಿ, ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ‘45’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಜೊತೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ಅದ್ದೂರಿಯಾಗಿ ಅನಾವರಣಗೊಂಡ ‘45’ ಟ್ರೇಲರ್ ಟ್ರೆಂಡಿಂಗ್‌ನಲ್ಲಿ
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ನಿರೀಕ್ಷೆಗೂ ಮೀರಿದ ಅನುಭವ ನೀಡಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಟ್ರೇಲರ್‌ನ ಪ್ರಮುಖ ಹೈಲೈಟ್‌ಗಳಲ್ಲೊಂದು ಶಿವಣ್ಣ ಅವರ ವಿಭಿನ್ನ ಲುಕ್ ಹಾಗೂ ಗ್ರಾಫಿಕ್ಸ್ ಬಳಕೆ ಎನ್ನಲಾಗಿದೆ.
‘45’ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರಕ್ಕೆ ಎಂ. ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದ್ದು, ಈಗಾಗಲೇ ಟ್ರೇಲರ್ ಮೂಲಕವೇ ಭಾರೀ ನಿರೀಕ್ಷೆ ಮೂಡಿಸಿದೆ.









