ವಿಜಯನಗರ: ಗ್ರಾಮಕ್ಕೊಬ್ಬನೇ ಗಣೇಶ, ಇಡೀ ಊರಲ್ಲಿ ಒಗ್ಗಟ್ಟಿನ ಮಂತ್ರ

0
47

ಹೊಳಲು: ಗಣೇಶ ಹಬ್ಬ ಎಂದಾಕ್ಷಣ ಊರೂರು ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುವುದು ರೂಢಿ. ಒಂದು ಪುಟ್ಟಹಳ್ಳಿ ಇದ್ದರೂ ಕೂಡಾ ಅಲ್ಲಿ ನಾಲ್ಕೈದು ಕಡೆ ಗಣೇಶನನ್ನು ಪ್ರತಿಷ್ಟಾಪಿಸಿದನ್ನೂ ಕೂಡಾ ನಾವು ನೋಡುತ್ತಿದ್ದೇವೆ. ಆದರೆ ಹೊಳಲು ಸಮೀಪದ ಲಿಂಗನಾಯಕನಹಳ್ಳಿ ಪ್ಲಾಟ್ ಎಂಬ ಗ್ರಾಮದಲ್ಲಿ ಊರಿಗೆ ಒಂದೇ ಗಣೇಶ ಎಂಬ ಘೋಷವಾಕ್ಯದಡಿ ಇಡೀ ಗ್ರಾಮಕ್ಕೆ ಒಂದೇ ಗಣೇಶನನ್ನು ಪ್ರತಿಷ್ಠಾಪಿಸಿ ಇಲ್ಲಿನ ಗಜಾನನ ಯುವಕ ಸಂಘದ ಸದಸ್ಯರು ಒಗ್ಗಟ್ಟಿನ ಮಂತ್ರವನ್ನು ಸಾರುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಪ್ರತಿವರ್ಷ ಗ್ರಾಮದಲ್ಲಿ ಪೈಪೋಟಿಯಿಂದ ಮೂರ್ನಾಲ್ಕು ಕಡೆ ಗಣೇಶನನ್ನು ಕೂಡಿಸಲಾಗುತ್ತಿತ್ತು. ಇದರಿಂದ ಗ್ರಾಮಸ್ಥರಿಗೆ ಭಕ್ತಿ ಕಾಣಿಕೆ ನೀಡಲು ಹೊರೆಯಾಗುತ್ತಿತ್ತಲ್ಲದೆ ಯುವಕರಲ್ಲಿ ಒಗ್ಗಟ್ಟು ಹೊರಟು ಹೋಗಿತ್ತು. ಆದರೆ ಪ್ರತಿವರ್ಷ ಪ್ರಕೃತಿ ವಿಕೋಪದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ಪರಿಸ್ಥಿತಿ ಮನಗಂಡು ಗ್ರಾಮಸ್ಥರೆಲ್ಲಾ ಸೇರಿ ಹಿರಿಯರ ಒಮ್ಮತದಿಂದ ಗ್ರಾಮದ ಒಂದೇ ಕಡೆ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.

ಐದು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಯುವಕರಿಗಾಗಿ ಕ್ರಿಕೇಟ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಶಾಲಾ ಮಕ್ಕಳಿಂದ ಹಾಗೂ ವಿವಿಧ ಕಲಾವಿದರಿಂದ ಸಾಂಸ್ಕೃತಿಕ, ಹಾಸ್ಯ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ.

ಹಬ್ಬ ಹರಿದಿನಗಳೆಂದರೆ ಯಾವುದೆ ಜಗಳ ವೈಷಮ್ಯವಿಲ್ಲದೆ ಒಬ್ಬರಿಗೊಬ್ಬರು ಅನೂನ್ಯತೆಯಿಂದ ಕೂಡಿ ಆಚರಿಸಿದರೆ ಮಾತ್ರ ಅಂತಹ ಹಬ್ಬಕ್ಕೊಂದು ಅರ್ಥಬರುತ್ತದೆ. ನಮ್ಮ ಗ್ರಾಮದಲ್ಲಿ ಊರಿಗೆ ಒಂದೇ ಗಣೇಶನನ್ನು ಪ್ರತಿಷ್ಠಾಪಿಸಿ ಆಚರಿಸುತ್ತಿರುವ ಹಬ್ಬದಿಂದ ಪ್ರತಿಯೊಬ್ಬರೂ ಸಂತೋಷ ಪಡುತ್ತಿದ್ದೇವೆ ಎಂದು ಗ್ರಾಮದ ಹಿರಿಯರು ಹೇಳುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಹಿರೇಹಡಗಲಿ ಪಿ.ಎಸ್.ಐ ಭರತ ಪ್ರಕಾಶ, “ಹಿರಿಯರು ಮತ್ತು ಯುವಕರು ಸೇರಿ ಊರಿಗೆ ಒಂದೇ ಗಣೇಶ ಎಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಲಿಂಗನಾಯಕನಹಳ್ಳಿ ಪ್ಲಾಟ್ ಗ್ರಾಮ ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಇದು ಪೊಲೀಸ್ ಇಲಾಖೆಗೆ ಸಂತೋಷ ತಂದಿದೆ” ಎಂದಿದ್ದಾರೆ.

Previous articleಬಾಗಲಕೋಟೆ: ಕೃಷ್ಣಾ ನದಿ ನೀರು ಇಳಿಮುಖ, ನಿಟ್ಟುಸಿರು ಬಿಟ್ಟ ಜನತೆ
Next articleದಕ್ಷಿಣ ಕನ್ನಡ: ಎಸ್ಐಟಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

LEAVE A REPLY

Please enter your comment!
Please enter your name here