ಕಾಂಗ್ರೆಸನ ಹಿಂದೂ ವಿರೋಧಿ ಮನಸ್ಥಿತಿ ಬಹಿರಂಗ: ಶಾಸಕ ಕಾಮತ್

0
42

ಮಂಗಳೂರು: ಹಿರಿಯ ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಕೋಮು ಪ್ರಚೋದನೆ ಎಂಬ ಕಪೋಲಕಲ್ಪಿತ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು ಹಾಗೂ ಉಡುಪಿ ಪರ್ಯಾಯದಲ್ಲಿ ಕೇಸರಿ ಧ್ವಜ ಕುರಿತಾಗಿ ಅನಗತ್ಯ ವಿವಾದ ಎಬ್ಬಿಸಿರುವುದು ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಅವರು ಕಾರ್ಯಕ್ರಮವೊಂದರಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇತಿಹಾಸ, ಸಮಾಜ ಹಾಗೂ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಗಂಭೀರ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅದನ್ನೇ ನೆಪ ಮಾಡಿಕೊಂಡು, ಧರ್ಮಗಳ ನಡುವೆ ದ್ವೇಷ ಉಂಟುಮಾಡಿದ್ದಾರೆ ಎಂಬ ರಾಜಕೀಯ ಪ್ರೇರಿತ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.

ಇದನ್ನೂ ಓದಿ:  ಸರ್ಕಾರಕ್ಕೆ ನಿಧಿ ನೀಡಿದ ಕುಟುಂಬಕ್ಕೆ ಪಂಚಾಯತನಿಂದ ನಿವೇಶನ

ವಾಕ್ ಸ್ವಾತಂತ್ರ್ಯದ ಹತ್ತಿಕ್ಕುವ ಪ್ರಯತ್ನ: ಈ ಬೆಳವಣಿಗೆಯನ್ನು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಬಣ್ಣಿಸಿದ ಶಾಸಕ ಕಾಮತ್, “ವಿಚಾರ ವ್ಯಕ್ತಪಡಿಸುವ ಹಕ್ಕನ್ನೇ ಹತ್ತಿಕ್ಕುವ ಮೂಲಕ ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗುತ್ತಿದೆ. ಹೇಗಾದರೂ ಮಾಡಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ, ತಮ್ಮ ವೋಟ್ ಬ್ಯಾಂಕ್ ಅನ್ನು ಖುಷಿಪಡಿಸುವ ಕಾಂಗ್ರೆಸ್‌ನ ಹುನ್ನಾರ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ”
ಎಂದು ಕಿಡಿಕಾರಿದರು.

ಉಡುಪಿ ಪರ್ಯಾಯದ ಕೇಸರಿ ಧ್ವಜ ವಿವಾದ: ಉಡುಪಿ ಪರ್ಯಾಯದಲ್ಲಿ ಕೇಸರಿ ಧ್ವಜ ವಿಚಾರವಾಗಿ ಉದ್ದೇಶಪೂರ್ವಕವಾಗಿ ವಿವಾದ ಎಬ್ಬಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ಶಾಸಕ ಕಾಮತ್ ವಾಗ್ದಾಳಿ ನಡೆಸಿದರು. “ಇದು ಈ ನೆಲದ ಮೂಲ ಸಂಸ್ಕೃತಿಯನ್ನೇ ಅವಮಾನಿಸುವ ಪ್ರಯತ್ನ. ಇದು ಕಾಂಗ್ರೆಸ್ ಪಕ್ಷದ ಅವನತಿಯ ಸ್ಪಷ್ಟ ಸಂಕೇತ” ಎಂದು ಅವರು ಹೇಳಿದರು.

ಇದನ್ನೂ ಓದಿ:  ವಿಜಯ್ ʼwhistleʼ ಗೆ ಆಯೋಗ ಅಸ್ತು

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವಾ ಧ್ವಜವೇ ಪ್ರಮುಖ ಸಂಕೇತವಾಗಿದ್ದು, “ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವಾ ಧ್ವಜವಲ್ಲದೆ ಮತ್ತೇನು ಹಾರಬೇಕು?” ಎಂದು ಪ್ರಶ್ನಿಸಿದರು.

ಭಗವಾ ಧ್ವಜ ನಿಲ್ಲಿಸಲಾಗದು – ಸವಾಲು: ಹಿಂದುತ್ವದ ಭದ್ರಕೋಟೆಯಾಗಿರುವ ಕರಾವಳಿ ಪ್ರದೇಶದಲ್ಲಿ, “ಪವಿತ್ರ ಭಗವಾ ಧ್ವಜ ಹಿಂದೆಯೂ ಹಾರಿತ್ತು, ಈಗಲೂ ಹಾರುತ್ತಿದೆ, ಮುಂದೆಯೂ ರಾರಾಜಿಸುತ್ತದೆ. ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದರು.

ಇದನ್ನೂ ಓದಿ:  ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್

ಇದೇ ವೇಳೆ, “ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದವರಿಗೆ ಬುದ್ದಿ ಹೇಳಿಸಿಕೊಳ್ಳುವ ದುರ್ಗತಿ ಹಿಂದೂ ಸಮಾಜಕ್ಕೆ ಬಂದಿಲ್ಲ” ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕೆ ನಡೆಸಿದರು.

ಈ ಎಲ್ಲಾ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೆ ಕಾರಣವಾಗಿವೆ.

Previous articleಸರ್ಕಾರಕ್ಕೆ ನಿಧಿ ನೀಡಿದ ಕುಟುಂಬಕ್ಕೆ ಪಂಚಾಯತನಿಂದ ನಿವೇಶನ
Next articleಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಗಿಲ್ಲಿ