Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ರಾಜ್ಯ ಕಸಾಪ ಅಧ್ಯಕ್ಷ ಮಹೇಶ ಜೋಶಿಗೆ ಕೋರ್ಟ್ ನೋಟಿಸ್‌ : ಇಕ್ಕಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ

ರಾಜ್ಯ ಕಸಾಪ ಅಧ್ಯಕ್ಷ ಮಹೇಶ ಜೋಶಿಗೆ ಕೋರ್ಟ್ ನೋಟಿಸ್‌ : ಇಕ್ಕಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ

0
86
ಆಡಳಿತಾಧಿಕಾರಿ ಕೆ.ಎಂ ಗಾಯತ್ರಿ ವಿರುದ್ಧ ದಲಿತರ ಪ್ರತಿಭಟನೆ ಚಿತ್ರ

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ: ಷರತ್ತು ಉಲ್ಲಂಘನೆ – ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನೋಟಿಸ್

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ್ಯಾಯಾಲಯದ ಮಧ್ಯಂತರ ಆದೇಶದ ಷರತ್ತುಗಳ ಅಡಿಯಲ್ಲಿ ನಡೆದಿದ್ದರೂ, ಇದೀಗ ಮತ್ತೆ ವಿವಾದಗಳ ಕೇಂದ್ರಬಿಂದುವಾಗಿರುವುದು ಕಂಡು ಬಂದಿದೆ. ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದ್ದು, ದಾಂಡೇಲಿ ನ್ಯಾಯಾಲಯದಿಂದ ಅವರಿಗೆ ನೋಟಿಸ್ ಜಾರಿಯಾಗಿದೆ.

ಈ ಪ್ರಕರಣದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್. ವಾಸರೆ) ಮೊದಲ ಪ್ರತಿವಾದಿಯಾಗಿದ್ದು, ಕ.ಸಾ.ಪ. ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಎರಡನೇ ಪ್ರತಿವಾದಿಯಾಗಿದ್ದಾರೆ. ಫೆಬ್ರವರಿ 5ರಂದು ನಡೆದ ವಿಚಾರಣೆಗೆ ಆಡಳಿತಾಧಿಕಾರಿ ಹಾಜರಾಗದ ಹಿನ್ನೆಲೆಯಲ್ಲಿ, ರಾಜ್ಯಾಧ್ಯಕ್ಷ ಮಹೇಶ್ ಜೋಶಿಯನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು: ವಿರೋಧ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಹಿಳಾ ಸಂಸದರ ಒತ್ತಾಯ

ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ವಿವಾದ: ದಾಂಡೇಲಿಯಲ್ಲಿ 2025ರ ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಆದರೆ, ಈ ಸಮ್ಮೇಳನಕ್ಕೆ ಸಂಬಂಧಿಸಿ ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಪ್ರವೀಣ ಕೊಠಾರಿ ಹಾಗೂ ಸಂದೀಪ ಬಂಡಾರಿ ಅವರು, ಹಣ ದುರುಪಯೋಗ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಸರಿಯಾದ ಸರ್ಕಾರಿ ಅನುಮತಿ ಪಡೆಯದೆ ಸಾರ್ವಜನಿಕ ವಂತಿಕೆ ಸಂಗ್ರಹಿಸಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ತಹಶೀಲ್ದಾರ್ ಮತ್ತು ಪಿಎಸ್‌ಐ ಅವರ ಅನುಮತಿ ಹೊರತುಪಡಿಸಿ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ, ಡಿವೈಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆಯಲಾಗಿಲ್ಲ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ನಂದಿನಿ (ಬಮುಲ್) ಬ್ರಾಂಡ್ ಅಂಬಾಸಿಡರ್‌ ಆಗಿ ಸುಧಾ ರಾಣಿ ನೇಮಕ

ನ್ಯಾಯಾಲಯದ ಗಮನಾರ್ಹ ಆದೇಶ: ನ್ಯಾಯಾಲಯದ O.S. No.216/25 ಆದೇಶದಲ್ಲಿ, ಪ್ರತಿವಾದಿ ಬೊಮ್ಮಯ್ಯ ವಾಸರೆ ಅವರು ಸಮ್ಮೇಳನ ನಡೆಸಲು ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸಮ್ಮೇಳನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿಂದ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದ್ದರೂ, ಪ್ರತಿವಾದಿಗಳು ಈ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆ ನ್ಯಾಯಾಲಯವು ಸಮ್ಮೇಳನಕ್ಕೆ ಸಂಬಂಧಿಸಿದಂತೆ ಶರತ್ತುಬದ್ಧ ಮಧ್ಯಂತರ ಆದೇಶ ನೀಡಿದ್ದು, ಅದರಲ್ಲಿ ಪ್ರಮುಖವಾಗಿ: ಎಲ್ಲಾ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯುವುದು, ಆಡಳಿತಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯುವುದು, ಅನುಮತಿ ಪಡೆದ ನಂತರ ಮಾತ್ರ ಸಮ್ಮೇಳನ ನಡೆಸುವುದು, ಅನುಮತಿ ಪಡೆದ ನಿಯಮಾವಳಿಗಳಂತೆ ಕಾರ್ಯಕ್ರಮ ನಡೆಸುವುದು, ಎಂಬ ಷರತ್ತುಗಳನ್ನು ವಿಧಿಸಿತ್ತು. ಈ ಆದೇಶ ಡಿಸೆಂಬರ್ 12ರ ಸಂಜೆ 6 ಗಂಟೆಗೆ ಹೊರಬಿದ್ದಿತ್ತು.

ಇದನ್ನೂ ಓದಿ: ಮೈಸೂರ್ ಸ್ಯಾಂಡಲ್‌ಸೋಪ್ ರಾಯಭಾರಿಯಾಗಿ ತಮನ್ನಾ

ರಾತ್ರಿ ವೇಳೆಯ ಇ-ಮೇಲ್ ಅನುಮತಿಗೆ ಸಂಶಯ: ನ್ಯಾಯಾಲಯದ ಆದೇಶದ ಕೆಲವೇ ಗಂಟೆಗಳಲ್ಲಿ, ಡಿಸೆಂಬರ್ 12ರ ರಾತ್ರಿ 9 ಗಂಟೆಗೆ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಂದ ಇ-ಮೇಲ್ ಮೂಲಕ ಅನುಮತಿ ಬಂದಿದೆ ಎಂದು ಜಿಲ್ಲಾಧ್ಯಕ್ಷ ವಾಸರೆ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ. ಅದೇ ವೇಳೆ, ನ್ಯಾಯಾಲಯಕ್ಕೆ ಹೋಗಿದ್ದ ಅಜೀವ ಸದಸ್ಯರ ವಿರುದ್ಧ ತೊಡೆ ತಟ್ಟುವ ಮೂಲಕ ತೀವ್ರ ಹೇಳಿಕೆ ನೀಡಿದ್ದರು ಎಂಬ ಆರೋಪವೂ ಇದೆ.

ಆದರೆ, ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಕಚೇರಿ ವೇಳೆಯಲ್ಲಿಯೇ ಕಡತ ಪರಿಶೀಲನೆ ನಡೆಯಬೇಕು. ರಾತ್ರಿ ವೇಳೆ ಇಂತಹ ಆದೇಶ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಾದಿಗಳ ಪರ ವಕೀಲ ರಾಘವೇಂದ್ರ ವಿ. ಗಡೆಪ್ಪನವರ ಹೇಳಿದ್ದಾರೆ.

ಇದನ್ನೂ ಓದಿ: BCCI ನಲ್ಲಿ ಕೋಚಿಂಗ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

RTI ಮೂಲಕ ಬಯಲಾದ ಮಾಹಿತಿ: ಈ ಪ್ರಕರಣದ ಹಿನ್ನೆಲೆಯಲ್ಲಿ ವಕೀಲರು ಕೇಂದ್ರ ಕ.ಸಾ.ಪ. ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ, ಆಡಳಿತಾಧಿಕಾರಿಗಳ ಅಧಿಕೃತ ಇ-ಮೇಲ್ ಮೂಲಕ ಕೇವಲ ಎರಡು ಸಾಲಿನ ಉತ್ತರ ಮಾತ್ರ ಲಭ್ಯವಾಗಿದೆ. ಅದರಲ್ಲಿ “ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಜಿಲ್ಲಾ ಸಮ್ಮೇಳನ ನಡೆಸಬಹುದು” – ಕೆ.ಎಂ. ಗಾಯತ್ರಿ, ಆಡಳಿತಾಧಿಕಾರಿ. ಎಂಬ ಉಲ್ಲೇಖವಿದ್ದು, ಯಾವುದೇ ಡಿಜಿಟಲ್ ಸಹಿ, ಕಡತ, ಕಚೇರಿ ಟಿಪ್ಪಣಿ ಅಥವಾ ಅಧಿಕೃತ ದಾಖಲೆಗಳು ಇಲ್ಲವೆಂದು ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.

ಆಡಳಿತ ಪ್ರಕ್ರಿಯೆ ಕುರಿತು ಪ್ರಶ್ನೆಗಳು: ಡಿಸೆಂಬರ್ 12ರಂದು ಆಡಳಿತಾಧಿಕಾರಿ ಗಾಯತ್ರಿ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹಾಜರಾತಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಅವರು ಬೆಳಗಾವಿಯಲ್ಲಿ ಇದ್ದಾಗ, ಬೆಂಗಳೂರು ಕಚೇರಿಯಿಂದ ಅಧಿಕೃತ ಕಡತವಿಲ್ಲದೇ ಇ-ಮೇಲ್ ಮೂಲಕ ಆದೇಶ ನೀಡಿದರೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಇದನ್ನೂ ಓದಿ: ಅಂತಿಮ ಹಂತದಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’

ಕಚೇರಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಇಂತಹ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದಕ್ಕೆ ಕೇಂದ್ರ ಕ.ಸಾ.ಪ. ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Previous articleಯುವ ಮನಸ್ಸುಗಳ ರಂಗ ಹಬ್ಬ ‘ಸೌರಭ-26’: ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿಭೆಗಳ ಸಮ್ಮಿಲನ!
Next articleಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಸುನೇತ್ರಾ ಅಧಿಕಾರ ಸ್ವೀಕಾರ