Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಪರಿಸರಕ್ಕೆ ಮಾರಕವಾದ ಬೇಡ್ತಿ, ಅಘನಾಶಿನಿ ಯೋಜನೆ ಬೇಡ

ಪರಿಸರಕ್ಕೆ ಮಾರಕವಾದ ಬೇಡ್ತಿ, ಅಘನಾಶಿನಿ ಯೋಜನೆ ಬೇಡ

0
52

ಶಿರಸಿ: ಪರಿಸರಕ್ಕೆ ಮಾರಕವಾದ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಉತ್ತರ ಕನ್ನಡ ಜಿಲ್ಲೆಯ ಸರ್ವಪಕ್ಷಗಳ ನಿಯೋಗ ಸೋಮವಾರ ದೆಹಲಿಯಲ್ಲಿ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿತು.

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವ ಪ್ರಲ್ಹಾದ್ ಜೋಶಿ, ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ.‌ ಕುಮಾರಸ್ವಾಮಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ನಿಯೋಗ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿ ಪಶ್ಚಿಮ ಘಟ್ಟ ಪರಿಸರ ವಿನಾಶದ ಮತ್ತು ಜನಜೀವನಕ್ಕೆ ಮಾರಕವಾದ ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ಆಗ್ರಹಪಡಿಸಿತು.

ಸಚಿವ ಸಿ.ಆರ್. ಪಾಟೀಲ್ ಅವರೊಂದಿಗಿನ ಸಭೆಯಲ್ಲಿ, ನಿಯೋಗವು ಉತ್ತರ ಕನ್ನಡದ ಪರಿಸರ ಸೂಕ್ಷ್ಮತೆ ಮತ್ತು ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಕಳವಳ ವ್ಯಕ್ತ ಮಾಡಿತು. ಜಿಲ್ಲೆಯಲ್ಲಿ ಈಗಾಗಲೇ ನಿರ್ಮಾಣವಾದ ಮತ್ತು ಉದ್ದೇಶಿತ ಬೃಹತ್ ಯೋಜನೆಗಳು, ಭಾರತೀಯ ವಿಜ್ಞಾನ ಮಂದಿರದ ಪರಿಸರ ಅಧ್ಯಯನ ಕೇಂದ್ರ ಸಲ್ಲಿಸಿರುವ ಜಿಲ್ಲೆಯ ಧಾರಣಾ ಸಾಮರ್ಥ್ಯ, ಬೇಡ್ತಿ – ಅಘನಾಶಿನಿ ನದಿ ಕಣಿವೆಗಳಲ್ಲಿ ವಾಸ್ತವಿಕವಾಗಿ ದೊರಕಬಹುದಾದ ನೀರಿನ ಪ್ರಮಾಣ, ನೀರಾವರಿ ಯೋಜನೆಗಳಿಂದ ಬಯಲುಸೀಮೆಯಲ್ಲಿ ಉಂಟಾಗುತ್ತಿರುವ ಕ್ಷಾರೀಯ ಸಮಸ್ಯೆಯ ಉಪಗ್ರಹ ಆಧಾರಿತ ಅಧ್ಯಯನ, ಮುಂತಾದ ಅಂಶಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.

ಕಳವಳಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಸಿ.ಆರ್. ಪಾಟೀಲ್, ಬೇಡ್ತಿ ಮತ್ತು ಅಘನಾಶಿನಿ ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದರೆ, ಕೇಂದ್ರ ಸರ್ಕಾರ ಖಂಡಿತವಾಗಲೂ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು. ಎರಡೂ ಯೋಜನೆಗಳು ರಾಜ್ಯದೊಳಗೆ ಇರುವುದರಿಂದ, ಪ್ರಮುಖ ನಿರ್ಧಾರವು ರಾಜ್ಯ ಸರ್ಕಾರದ ಮೇಲಿದೆ. ಯಾವುದೇ ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೊದಲು ಸಂಬಂಧಿತ ಸಂಶೋಧನಾ ಸಂಸ್ಥೆಗಳು ಸಲ್ಲಿಸಿದ ಎಲ್ಲಾ ವರದಿಗಳನ್ನು ಸಚಿವಾಲಯವು ಸಮಗ್ರವಾಗಿ ಅಧ್ಯಯನ ಮಾಡುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗವು ಪಶ್ಚಿಮ ಘಟ್ಟದ ಭಾರಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸುವಂತೆ ಎಲ್ಲಾ ಸಚಿವರನ್ನು ಆಗ್ರಹಿಸಿದೆ. ಅಲ್ಲಿಯವರೆಗೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಯಾವುದೇ ರೀತಿಯ ವಿಸ್ತೃತ ಯೋಜನಾ ವರದಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದಕ್ಕೆ ತಡೆ ನೀಡುವಂತೆ ಮನವಿ ಸಲ್ಲಿಸಿತು.

ಸಚಿವ ಮಂಕಾಳ ವೈದ್ಯ, ಶಾಸಕರುಗಳಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ಧಿ, ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ನರಸಿಂಹ ಹೆಗಡೆ ಬಾಳೆಗದ್ದೆ, ವಿಜ್ಞಾನಿ ಬಾಲಚಂದ್ರ ಸಾಯಿಮನೆ, ನಾರಾಯಣ ಗಡಿಕೈ, ವಿವೇಕ್ ಭಟ್ ಗಡಿಹಿತ್ಲು, ಶಿವಾನಂದ ಭಟ್ ಸಣ್ಣಕೇರಿ ಮುಂತಾದವರು ನಿಯೋಗದಲ್ಲಿದ್ದರು.

Previous articleಓದಿದ್ದು ಇಂಜಿನಿಯರಿಂಗ್, ಮಾಡ್ತಿರೋದು ಐಟಿ ಕೆಲಸ. ರಾತ್ರಿಯಾದ್ರೆ…
Next articleಆಕಸ್ಮಿಕ ಹೊತ್ತಿಕೊಂಡ ಬೆಂಕಿಗೆ ಹೊತ್ತಿ ಉರಿದ ಜೀಪು