ದಾಂಡೇಲಿ KSFIC ಮನೆಗಳಲ್ಲಿ ವಾಸಿಸುವ ಕಾರ್ಮಿಕರನ್ನು ತೆರವುಗೊಳಿಸದಂತೆ ಶಾಸಕರಿಗೆ ಮನವಿ

0
19

172 ಕುಟುಂಬಗಳ ಬದುಕಿನ ಪ್ರಶ್ನೆ: ವಸತಿ ಕಳೆದುಕೊಳ್ಳುವ ಭೀತಿ

ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರದಲ್ಲಿ ಕೆಎಸ್ಎಫ್ಐಸಿ (KSFIC) ಅಡಿಯಲ್ಲಿ ನಿರ್ಮಾಣಗೊಂಡಿದ್ದ 172 ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಹಾಗೂ ನಿವೃತ್ತ ಕಾರ್ಮಿಕರ ಕುಟುಂಬಗಳನ್ನು ತೆರವುಗೊಳಿಸದಂತೆ ಮತ್ತು ಅವರಿಗೆ ಖಾಯಂ ವಸತಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಡಿವೈಎಫ್ಐ ಜಿಲ್ಲಾ ಸಮಿತಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದೆ.

ದಾಂಡೇಲಿ ಪಟ್ಟಣವು ನಗರಸಭೆ ವ್ಯಾಪ್ತಿಗೆ ಸೇರಿದ ಬಳಿಕ, ಅರಣ್ಯ ಇಲಾಖೆಯಿಂದ ನಗರಸಭೆಗೆ 1958ರಿಂದ 1977ರ ಅವಧಿಯಲ್ಲಿ ಸುಮಾರು 1850 ಎಕರೆ ಜಮೀನನ್ನು ‘ಡಿಸ್ ಫಾರೆಸ್ಟ್’ ಆಗಿ ಹಸ್ತಾಂತರಿಸಲಾಗಿದೆ. ಈ ಪೈಕಿ ಇನ್ನೂ ಸುಮಾರು 50 ಎಕರೆ ಜಮೀನು ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಉಳಿದಿದೆ.

ಇದನ್ನೂ ಓದಿ:  DPL 2026: 5ನೇ ಸೀಸನ್ ಸಂಭ್ರಮಕ್ಕೆ ಸಜ್ಜಾದ ದಾಂಡೇಲಿ

ಈ ಜಮೀನನ್ನು ಕೂಡ ನಗರಸಭೆಗೆ ಹಸ್ತಾಂತರಿಸಿದಲ್ಲಿ ನಗರದ ಬೆಳವಣಿಗೆಗೆ ಅಗತ್ಯವಿರುವ ಮೂಲಭೂತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.

KSFIC ಮನೆಗಳ ಹಿನ್ನೆಲೆ: ಕೆಎಸ್ಎಫ್ಐಸಿ ಸಂಸ್ಥೆ ಅರಣ್ಯ ಇಲಾಖೆಯ ಕೈಗಾರಿಕಾ ಘಟಕವಾಗಿದ್ದು, ಆರಂಭಿಕ ದಿನಗಳಲ್ಲಿ ಇದು ಕಟ್ಟಿಗೆ ಉದ್ಯಮದ ರೂಪದಲ್ಲಿತ್ತು. ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ 172 ಮನೆಗಳನ್ನು ನಿರ್ಮಿಸಿ, ಮಾಸಿಕ ಬಾಡಿಗೆ ನಿಗದಿ ಮಾಡಿ ಕಾರ್ಮಿಕರಿಗೆ ನೀಡಲಾಗಿತ್ತು.

ಇದನ್ನೂ ಓದಿ:  ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲ–ಸರ್ಕಾರ ಭಾಷಣ ಸಂಘರ್ಷ

1962ರಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆ ಮತ್ತು ಕೆಎಸ್ಎಫ್ಐಸಿ ಕಾಯ್ದಿರಿಸಿಕೊಂಡಿದ್ದವು. ನಂತರ 1972ರಲ್ಲಿ ಈ ಜಮೀನು ಸಂಪೂರ್ಣವಾಗಿ ‘ಡಿಸ್ ಫಾರೆಸ್ಟ್’ ಆಗಿ ನಗರಸಭೆಯ ಸುಪರ್ದಿಗೆ ಹಸ್ತಾಂತರಗೊಂಡಿದೆ.

ಈ ಜಮೀನು ನಗರಸಭೆಗೆ ಸೇರಿದ ಹಿನ್ನೆಲೆಯಲ್ಲಿ, ಇಲ್ಲಿ ನಿರ್ಮಾಣಗೊಂಡಿರುವ 172 ಮನೆಗಳೂ ಸಹ ನಗರಸಭೆಯ ಆಸ್ತಿಯಾಗುತ್ತವೆ. ಹೀಗಾಗಿ ಈ ಮನೆಗಳ ಸಂಪೂರ್ಣ ನಿರ್ವಹಣೆ ಮತ್ತು ಉಸ್ತವಾರಿ ನಗರಸಭೆಯದ್ದೇ ಆಗಿರುತ್ತದೆ ಎಂದು ಡಿವೈಎಫ್ಐ ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ:  ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ : ಸ್ಪೀಕರ್‌ಗೆ R ಅಶೋಕ ದೂರು

ವಸತಿ ಕಳೆದುಕೊಳ್ಳುವ ಭೀತಿ: ಪ್ರಸ್ತುತ ಈ 172 ಮನೆಗಳಲ್ಲಿ ನಿವೃತ್ತ ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಕೆಎಸ್ಎಫ್ಐಸಿಯಿಂದ ಮನೆಗಳನ್ನು ಖಾಲಿ ಮಾಡುವಂತೆ ಮೌಖಿಕ ಸೂಚನೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೆ ವಾಸವಿರುವ ಕಾರ್ಮಿಕರಿಂದ ಬಾಡಿಗೆ ಕೂಡ ಸಂಗ್ರಹಿಸಲಾಗುತ್ತಿಲ್ಲ ಎಂದು ತಿಳಿದುಬಂದಿದ್ದು, ಇದರಿಂದಾಗಿ ಈ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿವೆ.

ಇದನ್ನೂ ಓದಿ:  ರಾಜ್ಯಪಾಲರಿಂದ ಸಂವಿಧಾನಾತ್ಮಕ ವಿಧಿಗಳ ಸ್ಪಷ್ಟ ಉಲ್ಲಂಘನೆ

ಈ ಮನೆಗಳು ನಗರಸಭೆ ವ್ಯಾಪ್ತಿಗೆ ಸೇರಿರುವುದರಿಂದ, ನಗರಸಭೆಯೇ ಅವುಗಳನ್ನು ನಿರ್ವಹಣೆ ಮಾಡಬೇಕು ಮತ್ತು ಇಲ್ಲಿ ವಾಸಿಸುತ್ತಿರುವವರಿಗೆ ವಸತಿ ಸೌಲಭ್ಯವನ್ನು ಖಾತ್ರಿಪಡಿಸಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ.

‘172 ಕುಟುಂಬಗಳ ಬದುಕಿನ ಪ್ರಶ್ನೆ’: “172 ಮನೆಗಳನ್ನು ಖಾಲಿ ಮಾಡಿಸಿದರೆ ಆ ಕುಟುಂಬಗಳು ಎಲ್ಲಿಗೆ ಹೋಗಬೇಕು? ದಾಂಡೇಲಿ ನಗರದಲ್ಲಿ ವರ್ಷಗಳಿಂದ ವಾಸಿಸುತ್ತಿರುವ ಈ ಕಾರ್ಮಿಕರ ಬದುಕಿನ ಹಿತವನ್ನು ಕಾಯುವುದು ನಗರಸಭೆಯ ಆದ್ಯ ಕರ್ತವ್ಯವಾಗಿದೆ. ಅವರಿಗೆ ಖಾಯಂ ವಸತಿ ಸೌಲಭ್ಯ ಒದಗಿಸುವ ಹೊಣೆಗಾರಿಕೆಯೂ ನಗರಸಭೆಯದ್ದೇ” ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮಸನ್ ಹೇಳಿದ್ದಾರೆ.

ವಿಡಿಯೋ ನೋಡಿ: ರಾಜ್ಯಪಾಲರನ್ನ ಅಡ್ಡಗಟ್ಟಿ ಕಾಂಗ್ರೆಸ್‌ ಆಕ್ರೋಶ

ವಸತಿ ಸೌಲಭ್ಯ ಖಾತ್ರಿಯಾಗುವವರೆಗೆ ಅರಣ್ಯ ಇಲಾಖೆ ಅಥವಾ ಕೆಎಸ್ಎಫ್ಐಸಿಯಿಂದ ಕಾರ್ಮಿಕರ ಕುಟುಂಬಗಳನ್ನು ಮನೆಗಳಿಂದ ತೆರವುಗೊಳಿಸದಂತೆ ತಡೆಯಬೇಕು. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಈಗಿರುವ ಮನೆಗಳನ್ನೇ ಖಾಯಂ ವಸತಿಯಾಗಿ ಘೋಷಿಸಿ ಸೌಲಭ್ಯ ಕಲ್ಪಿಸುವಂತೆ ಶಾಸಕರು ಹಾಗೂ ನಗರಸಭೆಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Previous articleಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ : ಸ್ಪೀಕರ್‌ಗೆ R ಅಶೋಕ ದೂರು