ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಕೇಂದ್ರ ದಾಂಡೇಲಿಗೆ ಹೊಸ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಕಾಳಿ ನದಿಯಲ್ಲಿ ನಡೆಯುವ ಜಲಕ್ರೀಡೆಗಳು (ವಾಟರ್ ಸ್ಪೋರ್ಟ್ಸ್) ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಇದರಿಂದಾಗಿ ದಾಂಡೇಲಿ ಸುತ್ತಮುತ್ತ ಜನಸಂದಣಿ ಹೆಚ್ಚಾಗಿದೆ.
ಆದರೆ ಪ್ರವಾಸಿಗರ ಹೆಚ್ಚಳದ ಜೊತೆಗೆ ಕಾರವಾರ–ಬೆಳಗಾವಿ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇದು ವಾಹನ ಸವಾರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಸಂಭವನೀಯ ಅಪಘಾತಗಳ ಭೀತಿ ಹೆಚ್ಚಲಿದೆ ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ
ಜೋಯಡಾ ತಾಲ್ಲೂಕಿನ ಇಳವಾ ಗ್ರಾಮದಲ್ಲಿ ಗಂಭೀರ ಸ್ಥಿತಿ: ಕಾರವಾರ–ಬೆಳಗಾವಿ ರಾಜ್ಯ ಹೆದ್ದಾರಿ ಜೋಯಡಾ ತಾಲ್ಲೂಕಿನ ಇಳವಾ ಗ್ರಾಮದ ಮೂಲಕ ಹಾದು ಹೋಗುತ್ತದೆ. ಇದೇ ಗ್ರಾಮದ ಪಕ್ಕದಲ್ಲಿ ಕಾಳಿ ನದಿ ಹರಿಯುತ್ತಿದ್ದು, ನದಿದಂಡೆಯ ಬಳಿ ಖಾಸಗಿ ರೆಸಾರ್ಟ್‌ಗಳು ಮತ್ತು ಜಲಕ್ರೀಡೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಲಕ್ರೀಡೆಗಾಗಿ ಬರುವ ಪ್ರವಾಸಿಗರ ವಾಹನಗಳಿಗೆ ಇಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದೆ.
ಪಾರ್ಕಿಂಗ್ ಸೌಲಭ್ಯಗಳ ಕೊರತೆಯಿಂದಾಗಿ ಪ್ರವಾಸಿಗರ ವಾಹನಗಳನ್ನು ಹೆದ್ದಾರಿಯ ಪಕ್ಕದಲ್ಲೇ ನಿಲ್ಲಿಸಲಾಗುತ್ತಿದ್ದು, ಇದರಿಂದಾಗಿ ಹೆದ್ದಾರಿಯ ಎರಡೂ ಕಡೆ ಕಿಲೋಮೀಟರ್‌ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಈ ಮಾರ್ಗದಲ್ಲಿ ಬಸ್‌ಗಳು, ಲಾರಿಗಳು ಹಾಗೂ ಇತರೆ ಭಾರೀ ವಾಹನಗಳು ನಿರಂತರವಾಗಿ ಸಂಚರಿಸುತ್ತಿದ್ದು, ಜಾಮ್ ಪರಿಸ್ಥಿತಿ ಭಾರೀ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಸರು ಖರೀದಿ ಗಡವು ವಿಸ್ತರಣೆ
ರಜೆ ದಿನಗಳಲ್ಲಿ ಹೆಚ್ಚುವರಿ ಒತ್ತಡ: ವಾರಾಂತ್ಯಗಳು, ರಜಾದಿನಗಳು ಹಾಗೂ ಹಬ್ಬದ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಚಾಲಕರು ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ನಿವಾಸಿಗಳ ದಿನನಿತ್ಯದ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ. ಪ್ರವಾಸಿಗರ ಸುರಕ್ಷತೆಗೂ ಧಕ್ಕೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಜಿಲ್ಲಾಡಳಿತದ ಗಮನಕ್ಕೆ ಸಾರ್ವಜನಿಕರ ಮನವಿ: ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಸುರಕ್ಷತೆ ಮತ್ತು ಶಿಸ್ತುಬದ್ಧ ಸಂಚಾರ ವ್ಯವಸ್ಥೆ ಅತ್ಯಂತ ಅಗತ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ಸ್ಥಳೀಯ ಆಡಳಿತದ ಜವಾಬ್ದಾರಿಯೂ ಆಗಿರುವುದರಿಂದ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: INSV Kaundinya: ಓಮನ್‌ಗೆ ಪ್ರಯಾಣ ಬೆಳೆಸಿದ ನೌಕಾಪಡೆಯ ಹಡಗು
ಜಲಕ್ರೀಡೆ ಕೇಂದ್ರಗಳ ಬಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು. ಅಪಘಾತ ಸಂಭವಿಸುವ ಅಪಾಯದ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವುದು. ಈ ರೀತಿಯ ಕ್ರಮಗಳಿಂದ ಪ್ರವಾಸಿಗರಿಗೂ ಸ್ಥಳೀಯರಿಗೂ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ದರ ಪೈಪೋಟಿ ಇಲ್ಲದ, ಆರೋಗ್ಯಕರ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತುರ್ತು ಗಮನ ಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.























