ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಹಾಕಿದ ಬೀಗವನ್ನು ಮಂಗಳವಾರ ತೆರವುಗೊಳಿಸಲಾಗಿದ್ದು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂಜೆ ಪೀಠ ಪ್ರವೇಶ ಮಾಡಿದ್ದಾರೆ. ಮೇಲ್ನೋಟಕ್ಕೆ ಬೀಗ ಹಾಕಿದ ವಿಷಯ ಸುಖಾಂತ್ಯವಾದಂತೆ ಕಂಡರೂ, ಸ್ವಾಮೀಜಿ ಆಡಿದ ಮಾತು ಕಾಶಪ್ಪನವರ ಹಾಗೂ ಅವರ ಮಧ್ಯದ ವೈಮನಸ್ಸು ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವಂತಿತ್ತು.
ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಂಕರಪ್ಪ ನೇಗಲಿ, ಪಂಚಮಸಾಲಿ ಪೀಠದ ಟ್ರಸ್ಟಿ ಎಲ್.ಎಂ. ಪಾಟೀಲ ನೇತೃತ್ವದಲ್ಲಿ ಕೂಡಲಸಂಗಮದ ಅನೇಕ ಭಕ್ತರು ಹುನಗುಂದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಭಕ್ತರ ಸಭೆಯಲ್ಲಿ ಇದ್ದ ಬಸವಜಯ ಮೃತ್ಯುಂಜಯ ಸ್ವಾಮಿಗಳ ಮನವೊಲಿಸಿ, ಕೂಡಲಸಂಗಮಕ್ಕೆ ಕರೆದುಕೊಂಡು ಹೊದರು. ಇದಕ್ಕೂ ಪೂರ್ವದಲ್ಲಿ ಟ್ರಸ್ಟಿ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಅವರೊಂದಿಗೆ ಮಾತನಾಡಿ ಪೀಠಕ್ಕೆ ಹಾಕಿದ್ದ ಬೀಗವನ್ನು ತೆರವುಗೊಳಿಸಿದರು.
ಬಸವಜಯ ಮೃತ್ಯುಂಜಯ ಸ್ವಾಮಿಗಳು ವಿಶ್ರಾಂತಿಗಾಗಿ ವಿಜಯ ಮಹಾಂತೇಶ ಮಠಕ್ಕೆ ಬರಲಿದ್ದಾರೆ ಎಂಬ ಸುದ್ದಿ ತಿಳಿದು ಜಿಲ್ಲೆ, ಹೊರ ಜಿಲ್ಲೆಯ ನೂರಾರು ಜನರು ಮಠದಲ್ಲಿ ಜಮಾಯಿಸಿದ್ದರು. ಸ್ವಾಮೀಜಿಗಳು ಬರುತ್ತಿದ್ದಂತೆ ನಿಮ್ಮ ಜೊತೆ ಭಕ್ತ ಸಮೂಹವಿದೆ. ಎದೆಗುಂದುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.
ಆರಂಭ-ಅಂತ್ಯ ಕೂಡಲಸಂಗಮದಲ್ಲಿಯೇ:
ಈ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೀಗ ಹಾಕಿದವರೂ ನಮ್ಮವರೇ, ಬೀಗ ತೆಗೆಸಿದವರು ನಮ್ಮವರೇ. ಬೀಗ ತೆಗೆದರೆ ಮಠದೊಳಗೆ ಹೋಗುವೆ, ಇಲ್ಲದಿದ್ದರೆ ಭಕ್ತರ ಮನೆಯಲ್ಲಿ ಉಳಿಯುವೆ. ಆದರೆ, 2ಎ ಮೀಸಲಾತಿ ಹೋರಾಟ ಆರಂಭಗೊಂಡಿದ್ದು ಕೂಡಲಸಂಗಮದಿಂದ, ಅಂತ್ಯ ಆಗುವುದು ಕೂಡಲಸಂಗಮದಲ್ಲಿಯೇ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಕಾಶಪ್ಪನವರಿಗೆ ಟಾಂಗ್ ನೀಡಿದರು.
ಸಮಾಜದ ಜನಪ್ರತಿನಿಧಿಗಳು ಹಿಡಿದು, ರೈತರು, ನೀರಾವರಿ, ನಾಡಿನ ನೆಲ, ಜಲ, ಭಾಷೆಯ ವಿಷಯ ಬಂದಾಗ ಧ್ವನಿ ಎತ್ತಿರುವೆ. ಈಗ ನನ್ನ ವಿರೋಧಿಸುವವರು ಕಷ್ಟಕಾಲದಲ್ಲಿ ಇದ್ದಾಗಲೂ ಅವರ ಪರವಾಗಿ ಮಾತನಾಡಿರುವೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
2ಎ ಮೀಸಲಾತಿಗಾಗಿ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಒತ್ತಡ ಹಾಕುವುದು ಉದ್ದೇಶವಾಗಿತ್ತು. ಸಮಾಜದ ಜನರ ಉತ್ಸಾಹ ನೋಡಿ ಮುಂದುವರೆಸುವ ನಿರ್ಧಾರಕ್ಕೆ ಬರಲಾಯಿತು. ಹೊಸ ಸರ್ಕಾರ ಬಂದ ಮೇಲೆ ಹೋರಾಟ ಕೈಬಿಡುವ ಒತ್ತಡ ಬಂತು. ಮುಂಚೂಣಿಯಲ್ಲಿದ್ದವರು ಹಿಂದೆ ಸರಿದಾಗ ನಾನು ನೇತೃತ್ವ ವಹಿಸಿಕೊಂಡೆ. ಇದು ಕೆಲವರಿಗೆ ಇರುಸುಮುರುಸಾಯಿತು ಎಂದು ಯಾರ ಹೆಸರು ಹೇಳದೆ ನಡೆದಿದ್ದನ್ನು ಭಕ್ತರ ಮುಂದೆ ಹಂಚಿಕೊಂಡರು.
ಈ ಕಾರಣದಿಂದ ಕಳೆದ ಕೆಲವು ತಿಂಗಳಿನಿಂದ ಮಠದಲ್ಲಿ ನನ್ನ ವಿರುದ್ಧ ಪಿತೂರಿ ನಡೆದಿದೆ. ಪೀಠ ಯಾರದೇ ಸ್ವತ್ತು ಆಗಬಾರದು. ಈ ವಿಷಯದಲ್ಲಿ ಭಕ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಶ್ರೀಗಳು ಹೇಳಿದರು.
ಸಮಗ್ರ ಚರ್ಚೆಯ ನಂತರ ಸೇರಿದ ಭಕ್ತರೆಲ್ಲ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಕೂಡಲಸಂಗಮ ಪೀಠಕ್ಕೆ ಕರೆದುಕೊಯ್ದರು. ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ, ಬಸವರಾಜ ಕಡಪಟ್ಟಿ, ಎಂ.ಎಸ್. ಪಾಟೀಲ, ಸುಭಾಷ ತಾಳಿಕೋಟಿ, ಡಾ. ಮಹಾಂತೇಶ ಕಡಪಟ್ಟಿ, ರುದ್ರಗೌಡ, ಶಿವಪ್ರಸಾದ ಗದ್ದಿ, ಮಹಾಂತೇಶ ಪರೂತಿ, ಮುತ್ತಣ್ಣ ಹೆರೂರ, ಸಂಗನಗೌಡ ನಾಡಗೌಡ್ರ, ಅಜ್ಜಪ್ಪ ನಾಡಗೌಡ ಇತರರು ಇದ್ದರು.