ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹಸೂಡಿ ಫಾರಂನಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದ್ದು, ತಂದೆಯ ಸಾವಿನ ದುಃಖದಲ್ಲಿಯೇ ವಿದ್ಯಾರ್ಥಿನಿ ತಾರುಣ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮಾನಸಿಕ ಧೈರ್ಯಕ್ಕೆ ಮಾದರಿಯಾಗಿದ್ದಾಳೆ.
ತಾರುಣ್ಯ ತಂದೆ ತಂಗರಾಜ್ ಮತ್ತು ತಾಯಿ ಮೀನಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಡೆಸುತ್ತಿದ್ದರು. ತಮ್ಮ ಇಬ್ಬರು ಪುತ್ರಿಯರು ಉತ್ತಮವಾಗಿ ಓದಿ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ತಂಗರಾಜ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದೆ.
ಈ ದುಃಖದ ಮಧ್ಯೆಯೇ ಬುಧವಾರ ಇಂಗ್ಲಿಷ್ ವಿಷಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದುದರಿಂದ ತಾರುಣ್ಯ ಗೊಂದಲಕ್ಕೀಡಾಗಿದ್ದಳು. ಒಂದೆಡೆ ತಂದೆಯ ಸಾವಿನ ನೋವು, ಮತ್ತೊಂದೆಡೆ ಭವಿಷ್ಯ ನಿರ್ಧರಿಸುವ ಪರೀಕ್ಷೆ—ಈ ಎರಡರ ಮಧ್ಯೆ ತತ್ತರಿಸಿದಳು.
ಕುಟುಂಬಸ್ಥರು, ಶಿಕ್ಷಕರು ಮತ್ತು ಸ್ನೇಹಿತರು ಧೈರ್ಯ ತುಂಬಿದ ಬಳಿಕ ತಾರುಣ್ಯ ಆತ್ಮಸ್ಥೈರ್ಯದಿಂದ, ತನ್ನ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಳು. ಬಳಿಕ ಮನೆಗೆ ಬಂದು ತಂದೆಯ ಅಂತಿಮ ದರ್ಶನ ಪಡೆದುಕೊಂಡಿರುವುದು ಇನ್ನಷ್ಟು ಮನ ಕಲುಕುವ ಸಂಗತಿ.
“ನೋವಿನಲ್ಲೂ ಚೆನ್ನಾಗಿ ಪರೀಕ್ಷೆ ಬರೆದಿದ್ದೇನೆ. ಆದರೆ ತಂದೆಯನ್ನು ಕಳೆದುಕೊಂಡ ನೋವನ್ನು ಸಹಿಸಲಾಗುತ್ತಿಲ್ಲ. ಮುಂದಿನ ದಿನಗಳು ಹೇಗಿರುತ್ತವೆ ಎಂಬ ಆತಂಕ ಕಾಡುತ್ತಿದೆ” ಎಂದು ತಾರುಣ್ಯ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾಳೆ.
ತಾಯಿ ಮತ್ತು ತಂಗಿಯ ಭವಿಷ್ಯದ ಹೊಣೆ ಹೊತ್ತಿರುವ ತಾರುಣ್ಯಗೆ ಬದುಕಿನ ಹಾದಿ ಹೇಳಿಕೊಂಡಷ್ಟು ಸುಲುಭವಲ್ಲ. ಗ್ರಾಮಸ್ಥರು ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದಾರೆ. ಆದರೆ, ಎಷ್ಟು ದಿನ ಎಂಬ ಪ್ರಶ್ನೆಯೂ ಸಹ ಹುಟ್ಟಿಕೊಂಡಿದೆ. ತಂದೆಯ ಸಾವಿನ ನೋವು ಭಾದಿಸಿದರೂ ಧೈರ್ಯದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ತಾರುಣ್ಯ ಇತರರಿಗೆ ಮಾದರಿಯಾಗಿದ್ದಾಳೆ.






















