ಶಿವಮೊಗ್ಗ: ಮಕ್ಕಳು ಆಗಿಲ್ಲವೆಂದು ನೂರಾರು ದೇವರುಗಳಿಗೆ ಬೇಡಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ತಾಯಿ ತಾನೇ ಹೆತ್ತ ಮಗುವಿನ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನ ಶೌಚಾಲಯದಲ್ಲಿ ಆ ಮಹಾತಾಯಿ ಈ ಕೃತ್ಯವನ್ನು ಎಸಗಿದ್ದಾಳೆ. ಒಂದು ದಿನದ ಗಂಡು ಮಗುವನ್ನು ಕತ್ತು ಸೀಳಿ ಕೊಲೆ ಮಾಡಿ ಸದ್ಯ ಕೇಂದ್ರ ಕಾರಾಗೃಹ ಸೇರಿದ್ದಾಳೆ.
ಕಳೆದ ಶನಿವಾರ ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನ ಶೌಚಾಲಯದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿ ಈಗ ಆರೋಪಿಯನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಕೊಲೆ ಮಾಡಿದ ಆರೋಪಿ. ದೊಡ್ಡಪೇಟೆ ಪೊಲೀಸರಿಗೆ ಆರಂಭದಲ್ಲೇ ಹೆರಿಗೆ ವಾರ್ಡ್‌ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಶೈಲಾ ಮೇಲೆ ಅನುಮಾನವಿತ್ತು.
ಆದರೆ, ದಂಪತಿ ಮಗು ತಮ್ಮದಲ್ಲ ಎಂದು ಪೊಲೀಸರಿಗೆ ಹೇಳಿದ್ದರು. ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಆ ದಿನ ಹೆರಿಗೆ ವಾರ್ಡ್‌ನಲ್ಲಿ ಆಗಿರುವ ಹೆರಿಗೆ ಮತ್ತು ತಾಯಂದಿರ ಎಲ್ಲ ಮಾಹಿತಿ ಕಲೆ ಹಾಕಿದ್ದರು. ಆ ದಿನ ಶೈಲಾ ಬಳಿ ಮಾತ್ರ ಮಗು ಇರದಿರುವುದು ಕಂಡು ಬಂದಿತ್ತು.
4-5 ದಿನಗಳಿಂದ ದೊಡ್ಡಪೇಟೆ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸಿದ್ದರು. ಹರಿಗೆ ವಾರ್ಡ್ಗೆ ಇಬ್ಬರು ಮಹಿಳಾ ಪೊಲೀಸ್ ಪೇದೆಗಳನ್ನು ನಿಯೋಜಿಸಿದ್ದರು. ದಿನಗಳು ಕಳೆದಂತೆ ಪೊಲೀಸರಿಗೆ ಶೈಲಾ ಮೇಲೆ ಅನುಮಾನ ದಟ್ಟವಾಗಿತ್ತು.
ಶೈಲಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಹೊರ ಬರುತ್ತಿದ್ದಂತೆ ದೊಡ್ಡಪೇಟೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಈಗಾಗಲೇ ಶೈಲಾಗೆ ಇಬ್ಬರು ಮಕ್ಕಳಿದ್ದಾರೆ.
ಶೈಲಾಗೆ ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆ. ನಂತರವೂ ಶೈಲಾ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿದ್ದನ್ನು ಕುಟುಂಬಸ್ಥರಿಂದ ಮುಚ್ಚಿಯಿಟ್ಟಿದ್ದಾಳೆ. ಶೈಲಾಗೆ ಥೈರಾಲ್ಡ್ ಇದೆ. ಇದನ್ನೇ ನೆಪ ಮಾಡಿಕೊಂಡು ಗರ್ಭಣಿ ಆಗಿರುವುದನ್ನು ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದಾಳೆ.
ಆ. 16ರಂದು ಶೈಲಾ ನಾದಿನಿಯ ಹೆರಿಗೆ ಇದೇ ಆಸ್ಪತ್ರೆಯಲ್ಲಿ ಆಗಿತ್ತು. ಅವರನ್ನು ನೋಡಲು ಆಸ್ಪತ್ರೆಗೆ ಬಂದಾಗ ಶೈಲಾಗೂ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಲಿಬಿಲಿಗೊಂಡ ಶೈಲಾ, ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಆ ದಿನ ಶೌಚಾಲಯದಲ್ಲಿ ಒಬ್ಬಳೇ ನಾರ್ಮಲ್ ಹೆರಿಗೆ ಮಾಡಿಕೊಂಡಿದ್ದಾಳೆ. ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್‌ನಿಂದ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ.
ಶೈಲಾ ಹೇಳಿಕೆ ಮತ್ತು ಕೆಲ ಸಾಕ್ಷಿಗಳ ಆಧಾರ ಮೇಲೆ ದೊಡ್ಡಪೇಟೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಶೈಲಾ ಸದ್ಯ ಕೇಂದ್ರ ಕಾರಾಗೃಹ ಸೇರಿದ್ದಾಳೆ.
ಪ್ರಕರಣ ಸಂಬಂಧ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, “ಮಗುವಿನ ಕೊಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಇದು ದೊಡ್ಡ ಅಪರಾಧವಾಗಿದೆ. ಮಕ್ಕಳು ಆಗಿಲ್ಲವೆಂದು ನಿತ್ಯ ಅನೇಕ ಮಹಿಳೆಯರು ಚಿಕಿತ್ಸೆಗೆ ಬರುತ್ತಾರೆ. ಮಕ್ಕಳಿಲ್ಲದ ಸಮಸ್ಯೆ ಅನುಭವಿಸಿ ಮಗುವಿಗಾಗಿ ದೇವರ ಮೊರೆ ಹೋಗುತ್ತಾರೆ. ಮಗುವನ್ನು ಕೊಲ್ಲುವಂತಹ ಕೃತ್ಯ ಯಾರು ಮಾಡಬಾರದು” ಎಂದರು.