ಶಿವಮೊಗ್ಗ: ಮಗಳನ್ನು ಕೊಲೆ ಮಾಡಿ ತಾಯಿಯೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವಸತಿಗೃಹದಲ್ಲಿ ನಡೆದಿದೆ.
ಶರಾವತಿ ನಗರದಲ್ಲಿರುವ ಆದಿಚಂಚನಗಿರಿ ಶಾಲೆಯ ಎದುರು ಇರುವ ಕ್ವಾರ್ಟರ್ಸ್‌ನ ಎಫ್ 2 ಬ್ಲಾಕ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಪೂರ್ವಿಕಾ (12) 6ನೇ ಕ್ಲಾಸ್ ಓದುತ್ತಿದ್ದ ಮಗಳ ಕೊಲೆ ಮಾಡಿದ ತಾಯಿ ಶೃತಿ (35) ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರಾಮಣ್ಣ ಮೆಗ್ಗಾನ್‌ನ ಖಾಯಂ ಲ್ಯಾಬ್ ಟೆಕ್ನಿಷಿಯನ್ ನೌಕರರಾಗಿದ್ದು ರಾತ್ರಿ ಪಾಳಿಗೆ ಹೋದಾಗ ಈ ಘಟನೆ ನಡೆದಿದೆ.
ರಾಮಣ್ಣ ಗುರುವಾರ ರಾತ್ರಿ 8 ಗಂಟೆಗೆ ತೆರಳಿದಾಗ ಮಗಳು ಪೂರ್ವಿಕ ಕರೆ ಮಾಡಿ ಮನೆಗೆ ಬಾ ಅಮ್ಮ ಕೂಗಾಡುತ್ತಿದ್ದಾಳೆ ಎಂದು ತಿಳಿಸಿದ್ದು, ಕರ್ತವ್ಯಕ್ಕೆ ಈಗ ಬಂದಿರುವೆ ಬೆಳಿಗ್ಗೆ ಬರುವೆ ಎಂದು ತಂದೆ ಹೇಳಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಬಂದಾಗ ಮನೆಯ ಬಾಗಿಲು ತೆಗೆದಿಲ್ಲ. ನಂತರ ಹಿಂಬದಿಯಲ್ಲಿ ಕಿಟಕಿಯಲ್ಲಿ ನೋಡಿದಾಗ ಶೃತಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ನಡುವೆ ಮಗುವಿನ ಹತ್ಯೆ ಮಾಡಿದ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದೊಡ್ಡಪೇಟೆ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಗಳನ್ನು ಕೊಂದು, ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಘಟನಾ ಸ್ಥಳದಲ್ಲಿ ತಜ್ಞರ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.