ಶಿವಮೊಗ್ಗ: ನಗರದ ಪಶ್ಚಿಮ ಸಂಚಾರಿ ಠಾಣೆಯ ಮುಖ್ಯ ಪೇದೆ ಮೊಹಮ್ಮದ್ ಜಕ್ರಿಯಾ (55) ಪೊಲೀಸ್ ಠಾಣೆಯಲ್ಲಿಯೇ ಗುರುವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರ್‌ಎಂಎಲ್ ನಗರದ ನಿವಾಸಿಯಾದ ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾರೆ. ಕೆಲಸದಲ್ಲೂ ಒಳ್ಳೆಯ ಹೆಸರು ಪಡೆದುಕೊಂಡಿದ್ದರು. ಮೂರು ತಿಂಗಳ ಹಿಂದೆ ಬಿದ್ದು, ಬೆನ್ನು ನೋವು ಮಾಡಿಕೊಂಡಿದ್ದರು. 2 ತಿಂಗಳಿನಿಂದ ರಜೆಯಲ್ಲಿದ್ದರು. ಮಂಗಳವಾರ ರಜೆ ಮುಗಿಸಿಕೊಂಡು ಕೆಲಸಕ್ಕೆ ಹಾಜರಾಗಿದ್ದರು. ರಾತ್ರಿ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ..?: 26 ವರ್ಷದಿಂದ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪ್ರಧಾನಿಯವರು ಉಡುಪಿಗೆ ಬಂದಾಗ ಅಲ್ಲಿಗೆ ಡ್ಯೂಟಿ ಮಾಡಲು ಹೋದಾಗಲು ಸಹ ಸಿಬ್ಬಂದಿ ಕಿರುಕುಳ ನೀಡಿದ್ದರು. ಬೇರೆ ಜಿಲ್ಲೆಯ ಸಿಬ್ಬಂದಿಯ ಹತ್ತಿರ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಅದರಿಂದ ಮನಸ್ಸಿಗೆ ತುಂಬಾ ಬೇಜಾರಾಗಿತ್ತು ಎಂಬುದನ್ನು ಡೆತ್‌ನೋಟ್‌ಲ್ಲಿ ಜಕ್ರಿಯಾ ಅವರು ಉಲ್ಲೇಖಿಸಿದ್ದಾರೆ.
ಡೆತ್‌ನೋಟ್ ಕೂಡ ವಾಟ್ಸಪ್‌ನಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಳಿಸಿದ್ದಾರೆ. ಸಹ ಸಿಬ್ಬಂದಿ ಕಿಂಡಲ್ ಮಾಡಿದ್ದಾರೆ. ತಮ್ಮ ಅನಾರೋಗ್ಯದ ಬಗ್ಗೆಯೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಸ್ಪಿ ನಿಖಿಲ್ ಬಿ. ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಕುಟುಂಬ ಸದಸ್ಯರಿಂದ ಬಹಿರಂಗವಾಗಿದ್ದು, ಸದ್ಯ ಅಸಹಜ ಸಾವು ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.























