ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ಅವಘಡ, ಬಾಲಕ ಸಾವು

0
27

ಶಿವಮೊಗ್ಗ (ಹೊಳೆಹೊನ್ನೂರು): ಗಣಪತಿ ಬಿಡುವ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಕುರುಬರ ವಿಠಲಾಪುರದಲ್ಲಿ ನಡೆದಿದೆ.

ಇಟ್ಟಿಗೆಹಳ್ಳಿಯ ಕುಶಾಲ್ (10) ಮೃತ ಬಾಲಕ. ಕುರುಬರ ವಿಠಲಾಪುರದ ಬೀದಿಯ ಪುಟಾಣಿ ಮಕ್ಕಳು ಮಣ್ಣು ಬಳಸಿ ತಾವೇ ಸ್ವತಃ ಗಣಪನ ಮೂರ್ತಿ ತಯಾರು ಮಾಡಿ ಪೂಜೆ ಸಲ್ಲಿಸಿದ್ದರು. ಸೋಮವಾರ ಸಂಜೆ ವೇಳೆಗೆ ಗಣಪನನ್ನು ಭದ್ರಾ ನಾಲೆಗೆ ವಿಸರ್ಜನೆ ಮಾಡುವಾಗ ಅವಘಡ ನಡೆದಿದೆ.

ಪಾಲಕರಿಗೆ ತಿಳಿಸದೆ ಮೂರು ಮಕ್ಕಳು ನಾಲೆಗೆ ತೆರಳಿದ್ದರು. ನಾಲೆಯಲ್ಲಿ ಗಣಪತಿ ಬಿಡುವಾಗ ಆಯತಪ್ಪಿದ ಬಾಲಕ ಕುಶಾಲ್ ನಾಲೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.

ಸ್ಥಳೀಯರು ನಾಲೆಯಲ್ಲಿ ಹುಡುಕಾಡಿ ಶವ ಹೊರ ತೆಗೆದಿದ್ದಾರೆ‌. ಇಟ್ಟಿಗೆಹಳ್ಳಿಯಲ್ಲಿ ಬಾಲಕ ಕುಶಾಲ್‌ನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ವಿಜಯಪುರದಲ್ಲಿ ಓರ್ವ ಯುವಕ ಸಾವು: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ತಗುಲಿ ಓರ್ವ ಯುವಕ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಜಯಪುರದ ಹೃದಯಭಾಗ ಗಾಂಧಿ ವೃತ್ತದಲ್ಲಿ ನಡೆದಿದೆ.

ಗಾಂಧಿ ವೃತ್ತದ ಟಾಂಗ್ ಸ್ಟ್ಯಾಂಡ್ ಬಳಿ ಡೊಬಳೆಗಲ್ಲಿ ಗಣಪತಿ 7ನೇ ದಿನದ ವಿಸರ್ಜನಾ ಮೆರವಣಿಗೆ ಹೊರಟಿದ್ದಾಗ, ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ತಗುಲಿ ಡೊಬಲಿ ಗಲ್ಲಿ ನಿವಾಸಿ ಶುಭಮ್ ಸಂಕದ (21) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸೋಲಾಪುರ್ ಮೂಲದ ಡಿಜೆ ಆಪರೇಟರ್ ಪ್ರಭಾಕರ್ ಜಂಗಲೆ (22) ಹಾಗೂ ಮತ್ತೋರ್ವ ಡೊಬಳೆ ಗಲ್ಲಿ ನಿವಾಸಿ ಲಖನ ಶ್ರೀಕಾಂತ ಚವ್ಹಾಣ(28) ಸೇರಿದಂತೆ ಓರ್ವ ಬಾಲಕನಿಗೂ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎಲ್ಲ ಗಣಪತಿಗಳನ್ನು ವಿಸರ್ಜನೆ ಮಾಡಿದ್ದಾರೆ.

Previous articleಶಿಲ್ಪಾ ಶೆಟ್ಟಿ: ಪ್ರಸಿದ್ಧ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್‌ ಮುಚ್ಚುವ ಘೋಷಣೆ
Next articleವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಘಟಿಕೋತ್ಸವ, ಮೂವರು ಸಾಧಕರಿಗೆ ಡಾಕ್ಟರೇಟ್

LEAVE A REPLY

Please enter your comment!
Please enter your name here