ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ

0
5

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಸಕಾರಾತ್ಮಕ ಸ್ಪಂದನೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕರ್ಮಚಾರಿ ರಾಜ್ಯ ವಿಮಾ ನಿಗಮದ (ESIC) ಉಪ-ಪ್ರಾದೇಶಿಕ ಕಚೇರಿ (Sub-Regional Office – SRO) ಸ್ಥಾಪಿಸುವ ಕುರಿತಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಹರಿಹರ ಸೇರಿ ಒಟ್ಟು 2.8 ಲಕ್ಷಕ್ಕೂ ಹೆಚ್ಚು (2,80,000) ವಿಮಾದಾರರು ಇರುವುದನ್ನು ಉಲ್ಲೇಖಿಸಿದ್ದಾರೆ. ಇದು ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಅಗತ್ಯವಿರುವ ಮಾನದಂಡವನ್ನು ಸ್ಪಷ್ಟವಾಗಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೆಸ್ಸಿ GOAT ಇಂಡಿಯಾ ಟೂರ್ ಸಂಭ್ರಮದ ನಡುವೆ ಅಭಿಮಾನಿಗಳಿಂದ ಆಕ್ರೋಶ

ಹುಬ್ಬಳ್ಳಿಗೆ ದೂರದ ಪ್ರಯಾಣದಿಂದ ಕಾರ್ಮಿಕರಿಗೆ ತೊಂದರೆ: ಪ್ರಸ್ತುತ, ಈ ಐದು ನಗರಗಳ ವ್ಯಾಪ್ತಿಯ ಸಾವಿರಾರು ಉದ್ಯೋಗದಾತರು ಮತ್ತು ಕಾರ್ಮಿಕರು ಸುಮಾರು 220 ಕಿಮೀ ದೂರದ ಹುಬ್ಬಳ್ಳಿಯ ESIC ಕಚೇರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ. ಶಿವಮೊಗ್ಗದಲ್ಲಿ ಹೊಸ ESIC SRO ಸ್ಥಾಪನೆಯಾದಲ್ಲಿ, ಕಾರ್ಮಿಕರಿಗೆ ವೇಗವಾದ, ಸುಲಭ ಮತ್ತು ಸ್ಥಳೀಯ ಮಟ್ಟದಲ್ಲಿ ಸೇವೆಗಳು ಲಭ್ಯವಾಗಲಿವೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐದು ಜಿಲ್ಲೆಗಳ ಕಾರ್ಮಿಕರಿಗೆ ನೇರ ಲಾಭ: ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಆರಂಭವಾದರೆ, ಐದು ಪ್ರಮುಖ ನಗರಗಳ 2.8 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮತ್ತು ಉದ್ಯೋಗದಾತರಿಗೆ ವೈದ್ಯಕೀಯ, ವಿಮಾ, ಪರಿಹಾರ ಹಾಗೂ ಆಡಳಿತಾತ್ಮಕ ಸೇವೆಗಳು ಒಂದೇ ಕೇಂದ್ರದಲ್ಲಿ ದೊರೆಯಲಿವೆ. ಇದರಿಂದ ಕಾರ್ಮಿಕ ಕಲ್ಯಾಣಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂಬ ವಿಶ್ವಾಸವನ್ನು ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರಿಂದ ಭರವಸೆ: ಈ ಮನವಿಗೆ ಸ್ಪಂದಿಸಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ, ವಿಷಯವನ್ನು ಆದ್ಯತೆ ಆಧಾರದ ಮೇಲೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಹಾಗೂ ಉದ್ಯೋಗ ವಲಯದ ಬೆಳವಣಿಗೆಗೆ ಈ ಕ್ರಮ ಮಹತ್ವದ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯ ರೈಲು ಸಂಪರ್ಕಕ್ಕೆ ಐತಿಹಾಸಿಕ ಬಲ!

Previous articleಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ