ಶಿವಮೊಗ್ಗ: ರೈತರೊಬ್ಬರಿಗೆ ಭೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಾರನ್ನೇ ಜಪ್ತಿ ಮಾಡಲು ಶಿವಮೊಗ್ಗದ ನ್ಯಾಯಾಲಯ ಆದೇಶ ಹೊರಡಿಸಿದೆ.
ಹರಮಘಟ್ಟದ ಕೃಷಿಕ ನಂದ್ಯಪ್ಪ, ಸರ್ವೆ ನಂಬರ್ 101ರಲ್ಲಿರುವ ತಮ್ಮ ಒಂದು ಎಕರೆ ಜಮೀನನ್ನ ಆಶ್ರಯ ಯೋಜನೆಗೆ 1992ರಲ್ಲಿ ಗ್ರಾಮ ಪಂಚಾಯಿತಿಗೆ ಬಿಟ್ಟುಕೊಟ್ಟಿದ್ದರು.
ಆದರೆ, ಪರಿಹಾರ ಮಾತ್ರ ಇಂದಿಗೂ ಸಿಕ್ಕಿಲ್ಲ. ನ್ಯಾಯಾಲಯದ ಮೊರೆ ಹೋದಾಗ 22,60,000 ರೂ. ಪರಿಹಾರ ನೀಡಲು ಆದೇಶವಾಗಿತ್ತು. ಜಿಲ್ಲಾಡಳಿತ ಮೊದಲ ಹಂತದಲ್ಲಿ 9 ಲಕ್ಷ ರೂ. ಪರಿಹಾರ ಮಾತ್ರ ನೀಡಿತ್ತು. ಸುಮಾರು 20 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಸುತ್ತಿ ಕಾಲು ಸವೆಸಿಕೊಂಡರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿಕೊಂಡಿದ್ದರು. ಕೊನೆಗೂ ಪರಿಹಾರ ಸಿಗದೇ ಇದ್ದಾಗ ಶಿವಮೊಗ್ಗ ನ್ಯಾಯಾಲಯದ ಮೊರೆ ಹೋಗಿದ್ದರು.
2020ರಲ್ಲಿ ವಿಚಾರಣೆ ನಡೆಸಿದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 95,88,283 ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿತ್ತು. ಕಳೆದ ಐದು ವರ್ಷದಿಂದ ಪರಿಹಾರಕ್ಕಾಗಿ ವಿಧಾನಸೌಧ, ಜಿಪಂ ಮತ್ತು ಜಿಲ್ಲಾಧಿಕಾರಿ ಕಚೇರಿ ತಿರುಗಿದರೂ ಹಣ ಬಂದಿರಲಿಲ್ಲ. ಆ ಹಿನ್ನೆಲೆಯಲ್ಲಿ ನಂದ್ಯಪ್ಪ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿಯ ಕೆಎ-14 ಜಿ-1234 ನಂಬರ್‌ನ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸುತ್ತಿರುವಾಗಲೇ ಜಿಲ್ಲಾಧಿಕಾರಿ ಕಚೇರಿಯ ಆವರಣಕ್ಕೆ ಜಪ್ತಿ ಮಾಡಲು ನ್ಯಾಯಾಲಯದ ಅಮೀನರು ಬಂದಿದ್ದರು.
ಕೋರ್ಟ್‌ಗೆ ಅಲೆದಾಡಿ ಜಮೀನು ಕಳೆದುಕೊಂಡ ರೈತ: ನ್ಯಾಯಾಲಯದ ಹೋರಾಟದಲ್ಲಿ ನನ್ನ ಇನ್ನೊಂದು ಎಕರೆ ಜಮೀನನ್ನು ಕಳೆದುಕೊಳ್ಳಬೇಕಾಯಿತು. ವಯಸ್ಸಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದೇನೆ. ಬೆಂಗಳೂರು, ಶಿವಮೊಗ್ಗ ನ್ಯಾಯಾಲಯಕ್ಕೆ ಅಲೆದಾಡಿ ಸುಸ್ತಾಗಿದ್ದು, ಅಧಿಕಾರಿಗಳು ಕರುಣೆ ತೋರುತ್ತಿಲ್ಲ ಎಂದು ತಮ್ಮ ಗೋಳನ್ನು ನಂದ್ಯಪ್ಪ ಅಧಿಕಾರಿಗಳ ಸಮ್ಮುಖದಲ್ಲಿ ತೋಡಿಕೊಂಡರು. ಸದ್ಯ ಜಿಲ್ಲಾಧಿಕಾರಿಯವರು ಪರಿಹಾರ ವಿತರಣೆಗೆ ಗಡುವು ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





















