ಶಿವಮೊಗ್ಗ: ಕಬ್ಬು ಮತ್ತು ಮೆಕ್ಕೆಜೋಳಗಳ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರೈತರಿಗೆ ಅನ್ಯಾಯವಾಗಬಾರದೆಂದು ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆಯಲ್ಲಿ ಕೆಲ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಬಿಜೆಪಿಯವರು ಪ್ರತಿಭಟನೆಗೆ ಇಳಿಯುವ ಮುನ್ನ ಯೋಚಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯ ಒಂದರಿಂದ 12ನೇ ತರಗತಿಯ ಮಕ್ಕಳಿಗೆ ಉಚಿತ ನೋಟ್‌ಬುಕ್, ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು. ಕೇವಲ ಒಂದು ಮಗು ಇರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಪುನರುಚ್ಛರಿಸಿದ ಅವರು 800 ಪಿಯು ಉಪನ್ಯಾಸಕರು, 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮೂರು ಪರೀಕ್ಷಾ ಪದ್ಧತಿ ಮುಂದುವರಿಯಲಿದೆ ಎಂದರು.
ಅಶೋಕ ಬಹಳ ಬುದ್ಧಿವಂತ: ಶೇ. 63 ಭ್ರಷ್ಟಾಚಾರದ ಬಗ್ಗೆ ವಿಪಕ್ಷದ ನಾಯಕ ಆರ್. ಅಶೋಕ್ ಹೊಟ್ಟೆಕಿಚ್ಚಿಗೆ ಮಾತನಾಡಿದ್ದಾರೆ. ಅವರು ರಾಜ್ಯ ಸರ್ಕಾರದ ಬಗ್ಗೆ ಹೇಳಿದ್ದಾರೆ ಎಂದು ಮಾಧ್ಯಮಗಳು ಬಿತ್ತರಿಸಿವೆ. ಆದರೆ ಅವರು ಬಿಎಸ್‌ವೈ ಸರ್ಕಾರದ ಬಗ್ಗೆ ಹೇಳಿರುವುದು. ಪಾಪ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಲು ಯಡಿಯೂರಪ್ಪ ದೆಹಲಿಗೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ಬೇಕಂತಲೇ ಬಿಜೆಪಿ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಅಶೋಕ ಬಹಳ ಬುದ್ಧಿವಂತ. ಸಂಸದ ರಾಘವೇಂದ್ರ ಇದನ್ನು ತಿಳಿದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಕುಟುಕಿದರು.






















