ರಾಯಚೂರು: ರಾಯಚೂರು ಜಿಲ್ಲೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನಗರದ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ವಾಲ್ಮೀಕಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಗೆ ಆಗಮಿಸಿದ್ದ ಸ್ವಾಮೀಜಿಗಳು, ನಿನ್ನೆ ರಾತ್ರಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಇದೇ ವೇಳೆ ಅವರಿಗೆ ಏಕಾಏಕಿ ಎದೆನೋವು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ: ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ
ವೈದ್ಯರ ಸಲಹೆಯಂತೆ ಹೆಚ್ಚಿನ ಪರಿಣತ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ, ಸ್ವಾಮೀಜಿಯನ್ನು ತಕ್ಷಣವೇ ಹೈದರಾಬಾದ್‌ಗೆ ಕರೆದೊಯ್ಯಲಾಯಿತು. ಅಪೋಲೋ ಆಸ್ಪತ್ರೆಯಲ್ಲಿ ಹೃದಯ ತಜ್ಞರ ತಂಡ ಅವರ ಆರೋಗ್ಯವನ್ನು ನಿಕಟವಾಗಿ ಪರಿಶೀಲಿಸುತ್ತಿದ್ದು, ಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.
ಸ್ವಾಮೀಜಿಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಭಕ್ತರು ಹಾಗೂ ಅನುಯಾಯಿಗಳಲ್ಲಿ ಆತಂಕ ಮೂಡಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ. ಮಠದ ಆಡಳಿತ ಮಂಡಳಿ ಭಕ್ತರಿಗೆ ಆತಂಕಪಡಬೇಡಿ ಎಂದು ಮನವಿ ಮಾಡಿದ್ದು, ಸ್ವಾಮೀಜಿಗಳ ಆರೋಗ್ಯದ ಬಗ್ಗೆ ನಿಯಮಿತ ಮಾಹಿತಿ ನೀಡುವುದಾಗಿ ತಿಳಿಸಿದೆ.























